ಚುನಾವಣೆಯ ದಿನಾಂಕ ಅಧಿಕೃತವಾಗಿ ಘೋಷಣೆ ಆದ ಕೂಡಲೇ ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಎಗ್ಗಿಲ್ಲದೆ ಮುಂದುವರಿದಿದೆ. ‘ನಾಲಿಗೆ ಕುಲವ ಹೇಳಿತು’ ಎಂಬAತೆ ಅಂಕೆತಪ್ಪಿದ ಹೇಳಿಕೆಗಳ ಭರಾಟೆ, ಮಾತು-ಪ್ರತಿಮಾತು, ಲಜ್ಜೆಗೇಡಿತನದ ನಡೆಯ ಅಬ್ಬರ.

ಇವೆಲ್ಲದರ ನಡುವೆ ಜನಪರ ಕಾಳಜಿ, ನಾಯಕತ್ವದ ಗುಣ, ಶಾಸಕಾಂಗದ ಮಹತ್ವದ ಅರಿವು, ಪ್ರಗತಿಯ ಮುನ್ನೋಟ ಮರೆಯಾಗಿ, ಹೇಗಾದರೂ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕು ಎಂಬ ಹಪಾಹಪಿ ವಿಜೃಂಭಿಸತೊಡಗಿದೆ.

ರಾಜಕೀಯದಲ್ಲಿ ಧರ್ಮ ಬೆರೆಸಿ ಸ್ವಾರ್ಥ ಮತ್ತು ದುರಾಸೆಯ ರಾಜಕಾರಣದೊಂದಿಗೆ, ಒಡೆದು ಆಳುವ ನೀತಿ ಸ್ಪಷ್ಟವಾಗಿ ಗೋಚರಿಸ ತೊಡಗಿದೆ. ದ್ವೇಷ ಭಾಷಣಗಳು ಹೆಚ್ಚತೊಡಗಿ ಚುನಾವಣೆ ಶಾಂತಿಪೂರ್ಣ ವಾಗಿ ಕೊನೆಗೊಳ್ಳುವುದೇ ? ಎನ್ನುವ ಪ್ರಶ್ನೆ ಮೂಡುವಷ್ಟರ ಮಟ್ಟಿಗೆ ಅಸಹನೀಯವಾಗತೊಡಗಿದೆ. ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವ ದಿಸೆಯಲ್ಲಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವುದು ಇಂದಿನ ಮೂಲಭೂತ ಅಗತ್ಯತೆ. ದ್ವೇಷ ಭಾಷಣ ಹೆಚ್ಚಲು ಆಡಳಿತದ ಸಡಿಲ ಧೋರಣೆಯೇ ಕಾರಣ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಇಂದು ಕಚ್ಚಾಡುವ ರಾಜಕಾರಣಿಗಳು ಅಧಿಕಾರ ಲಾಲಸೆಗೋ, ಸ್ವಹಿತಾಸಕ್ತಿಗೋ ಮತ್ತೆ ಒಂದಾಗುತ್ತಾರೆ. ಆದರೆ ಪಕ್ಷದ ಗೆಲುವಿಗಾಗಿ ಶ್ರಮಿಸಿ ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗುವ ಕಾರ್ಯಕರ್ತರ ವೈಷಮ್ಯ ಬೆಳೆಯುತ್ತಲೇ ಸಾಗುತ್ತದೆ. ಕೇವಲ ಒಂದಷ್ಟು ಜನರ ಅಧಿಕಾರ, ಭವಿಷ್ಯಕ್ಕಾಗಿ ಕ್ಷೇತ್ರದಾದ್ಯಂತ ವಿಷಮಯ ವಾತಾವರಣ ಸೃಷ್ಟಿಯಾಗದಂತೆ ಎಚ್ಚರಿಕೆಯ ನಡೆ ಅಗತ್ಯ.

ನಿಸರ್ಗಸಿರಿಗೆ ಖ್ಯಾತಿವೆತ್ತು, ವಿಶಿಷ್ಟ ಸಂಸ್ಕೃತಿ - ಸಂಪ್ರದಾಯ ಜೊತೆಗೆ ಸಾಮರಸ್ಯದ ಜೀವನದೊಂದಿಗೆ ಸದಾ ಕಂಗೊಳಿಸುವ ಕೊಡಗಿನಲ್ಲಿ ಚುನಾವಣೆ ಸಂದರ್ಭ ಇಂತಹ ಅಸಹನೀಯ ಸನ್ನಿವೇಶ ಸೃಷ್ಟಿಯಾಗದಿರಲಿ. ರಾಜ್ಯದ ಇತರೆಡೆಗಳಿಂದ ಭೌಗೋಳಿಕವಾಗಿಯೂ, ಸಾಮಾಜಿಕವಾಗಿಯೂ ಭಿನ್ನವಾಗಿರುವ ಈ ಪುಟ್ಟ ಜಿಲ್ಲೆಯಲ್ಲೂ ಸಮಸ್ಯೆಗಳು ಇತರೆಡೆಗಳಿಂದ ವಿಭಿನ್ನ. ಈ ಹಿನ್ನೆಲೆ ಯಾರೇ ಅಭ್ಯರ್ಥಿ ಆಗಿರಲಿ, ಯಾವುದೇ ಪಕ್ಷವಾಗಿರಲಿ, ಕೊಡಗಿನ ಪ್ರಗತಿಯ ಧ್ಯೇಯ ವಾಕ್ಯದೊಂದಿಗೇ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿ.

ಪಕ್ಷಗಳು ರಾಜ್ಯಕ್ಕೆ ಸಂಬAಧಿಸಿದAತೆ ಚುನಾವಣಾ ಪ್ರಣಾಳಿಕೆ ರೂಪಿಸಿದರೆ, ಕೊಡಗಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕೊಡಗಿನ ಪ್ರಗತಿಗೆ ಸಂಬAಧಿಸಿದAತೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ರೂಪಿಸಿ, ಅದರ ಆಧಾರದಲ್ಲಿ ಮತ ಯಾಚಿಸಿದರೆ ಚುನಾವಣೆ ಅರ್ಥಪೂರ್ಣವಾಗುತ್ತದೆ.

ರಾಜ್ಯದ ೨೨೪ ಶಾಸಕರ ಪೈಕಿ ಕೊಡಗನ್ನು ಪ್ರತಿನಿಧಿಸುವ ಶಾಸಕರು ಕೇವಲ ಇಬ್ಬರು. ವಿಧಾನಸಭೆಯಲ್ಲಿ ಕೊಡಗಿನ ಸಂಖ್ಯಾಬಲ ಕಡಿಮೆ ಇರುವುದು ಜಿಲ್ಲೆಯ ಯೋಜನೆಗಳಿಗೆ ಅನುಮೋದನೆ ದಕ್ಕಿಸಿಕೊಳ್ಳಲು ತೊಡಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ, ಕೊಡಗಿನ ವಿಧಾನಸಭಾ ಕ್ಷೇತ್ರಗಳನ್ನು ಕನಿಷ್ಟ ೫ಕ್ಕೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ, ಕಾರ್ಯ ಸಾಧಿಸುವ ಭರವಸೆ ಪ್ರಣಾಳಿಕೆಯನ್ನು ಪ್ರಾಮುಖ್ಯತೆ ಪಡೆಯಲಿ.

ಚುನಾವಣೆ ಸಮೀಪಿಸಿದಂತೆ ಜನಾಂದೋಲನ, ಪ್ರತಿಭಟನೆ, ಒತ್ತಡ ತಂತ್ರದ ಮೂಲಕ ರಾಜ್ಯದ ಅನೇಕ ಸಮುದಾಯಗಳು ಮೀಸಲು ಸೌಲಭ್ಯ ಹೆಚ್ಚಿಸಿಕೊಂಡಿವೆ. ‘ಅಳದಿರುವ ಮಗುವಿಗೆ ತಾಯಿ ಹಾಲು ನೀಡಲಿಲ್ಲ’ ಎನ್ನುವಂತೆ ಕೊಡಗಿನ ಅನೇಕ ಸಮುದಾಯಗಳು ಈ ಹಕ್ಕಿನಿಂದ ವಂಚಿತವಾಗಿದೆ. ಇವುಗಳಿಗೂ ನ್ಯಾಯ ದೊರಕಿಸುವ ಅಂಶಗಳು ಪ್ರಣಾಳಿಕೆಯಲ್ಲಿದ್ದರೆ ಸೂಕ್ತ.

ಭೂಕುಸಿತ, ಪ್ರವಾಹದಂತಹ ಸನ್ನಿವೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸದAತೆ ಮುನ್ನೆಚ್ಚರಿಕೆಯ ಕ್ರಮಗಳು, ಅಂತಹವು ಸಂಭವಿಸಿದಾಗ ಮತ್ತು ಕೊರೊನಾ ದಂತಹ ಮಹಾಮಾರಿ ಕಾಡಿದಾಗ, ಜನರ ನಡುವೆಯೇ ಓಡಾಡಿ ಜನಪರವಾಗಿ ಸ್ಪಂದಿಸುವ ಭರವಸೆ ಮತ್ತು ಛಾತಿ ಇರಲಿ. ಜಿಲ್ಲೆಯ ಸರಕಾರಿ ಶಾಲೆಗಳ ಸುಧಾರಣೆ, ಶಿಕ್ಷಣ, ಫಲಿತಾಂಶ ಹೆಚ್ಚಲು ಕ್ರಮ, ಪ್ರವಾಸೋದ್ಯಮ ಪುನಶ್ಚೇತನ, ಮಾಜಿ ಯೋಧರ ಮತ್ತು ಅವರ ಕುಟುಂಬದವರ ಸಮಸ್ಯೆ, ಪೌರ ಕಾರ್ಮಿಕರು, ಆದಿವಾಸಿಗಳ ಸಮಸ್ಯೆ, ಪಿಂಚಣಿದಾರರ ಸಮಸ್ಯೆ, ಕೊಡಗಿನ ಹದಗೆಟ್ಟ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಬಗೆಹರಿಸುವ ಮತ್ತು ಈ ನಿಟ್ಟಿನಲ್ಲಿ ಪ್ರಗತಿಯ ವಾರ್ಷಿಕ ವರದಿ ಕಡ್ಡಾಯವಾಗಿ ಜನತೆಗೆ ಒಪ್ಪಿಸುವ ಕಳಕಳಿಯ ಭರವಸೆ ಈ ಪ್ರಣಾಳಿಕೆಗೆ ಮೆರುಗು ನೀಡಬಲ್ಲದು.

ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ಯೋಜನೆಗಳು, ವನ್ಯಜೀವಿ ಉಪಟಳ ತಡೆಗೆ ಶಾಶ್ವತ ಯೋಜನೆ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ರೈತರು, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಧ್ವನಿಗೂಡಿಸಿ, ಸಕಾಲದಲ್ಲಿ ನೆರವು ಒದಗಿಸುವ ಭರವಸೆ ಸಮಂಜಸವಾಗಬಲ್ಲದು.

ಕೊಡಗಿನ ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸಲು ಜಿಲ್ಲೆಯಲ್ಲಿ ಫೋರೆನ್ಸಿಕ್ ಸೈನ್ಸ್, ಫಿಜಿಯೋ ಥೆರಪಿ, ರೇಡಿಯೊಲಜಿ, ಹ್ಯೂಮನ್ ಸೈಕಾಲಜಿ... ಇಂತಹ ಹೊಸ ಕೋರ್ಸ್ಗಳ ಆರಂಭ, ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣ, ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪನೆ, ಪರಿಸರ ವಿಶ್ವ ವಿದ್ಯಾಲಯ ಸ್ಥಾಪನೆ, ಜಿಲ್ಲೆಯ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಇಂತಹ ಪ್ರಗತಿಪರ ವಿಚಾರಗಳ ಪ್ರಣಾಳಿಕೆ ಮತ್ತು ಮುಕ್ತ ಚರ್ಚೆಯೊಂದಿಗೆ, ಶಾಂತಿ ಕದಡದ ಸೌಹಾರ್ದಮಯ ವಾತಾವರಣದಲ್ಲಿ ಸದ್ದುಗದ್ದಲ, ಸಾಮಾಜಿಕ ಜಾಲತಾಣದ ಅಬ್ಬರ, ಅನಗತ್ಯ ಗೊಂದಲಗಳಿಲ್ಲದೆ ಚುನಾವಣೆ ನಡೆದರೆ ಚೆನ್ನ. ಅಲ್ಲವೇ?! ಮುಖ್ಯವಾಗಿ ವದಂತಿಗಳಿಗೆ ಕಿವಿಗೊಡದಿರೋಣ.

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.