ಸಿದ್ದಾಪುರ, ಏ. ೧೦: ಮಳೆಗಾಲದಲ್ಲಿ ಉಕ್ಕಿ ಹರಿಯು ತ್ತಿರುವ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಳ್ಳುತ್ತಿದೆ. ಕಾವೇರಿ ನದಿಯಲ್ಲಿ ಬಂಡೆ ಕಲ್ಲುಗಳು ಎದ್ದು ಕಾಣುತ್ತಿವೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಒಂದು ತಿಂಗಳ ಹಿಂದೆ ಅಲ್ಪ ಪ್ರಮಾಣದ ಮಳೆ ಬಂದಿದ್ದು ಹೊರತುಪಡಿಸಿ ಈವರೆಗೂ ಮಳೆ ಬಂದಿರುವುದಿಲ್ಲ. ಕೆರೆ, ತೋಡು ನದಿಗಳಿಂದ ನೀರು ಬಳಸಿ ಕಾಫಿ ತೋಟಕ್ಕೆ ನೀರು ಹಾಯಿಸಿದರು. ಬಿಸಿಲಿನ ಬೇಗೆಗೆ ಕಾಫಿ ಹೂವುಗಳು ಒಣಗುತ್ತಿವೆ. ಬಿಸಿಲಿನಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವವಿದೆ.

ಕಾವೇರಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ದಿನನಿತ್ಯ ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿಯುತ್ತಿಲ್ಲ. ಕೃಷಿಕರು, ಬೆಳೆಗಾರರು ಮಳೆ ಬರಬಹುದೆಂದು ನಿರೀಕ್ಷೆಯಲ್ಲಿ ಇದ್ದಾರೆ. ಬೆಳೆಗಾರರಿಗೆ ಮಳೆ ಬಾರದ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಶುಂಠಿ ಕೃಷಿಕರು ಕೂಡ ಆಕಾಶದತ್ತ ನೋಡುತ್ತಿದ್ದಾರೆ. ತಾಪಮಾನ ಅಧಿಕವಾಗಿರುವುದರಿಂದ ಕಾಫಿ ಗಿಡಗಳು ಸೊರಗಿ ಹೋಗುತಿವೆ. ಪಟ್ಟಣಕ್ಕೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವ ಮಂದಿ ತಮ್ಮ ತಮ್ಮಲ್ಲೇ ಮಳೆಯ ಬಗ್ಗೆ ಚರ್ಚಿಸುತ್ತಿರುವುದು ಕಂಡು ಬರುತ್ತಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕ್ಷೀಣಗೊಳ್ಳುತ್ತಿರುವುದ ರಿಂದ ಗ್ರಾಮಸ್ಥರಿಗೆ ಹಾಗೂ ಕೃಷಿಕರಿಗೆ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ವರುಣ ದೇವನ ಮೊರೆ ಹೋಗುವ ಸಾಧ್ಯತೆ ಇದೆ. ಗ್ರಾಮದ ದೇವರುಗಳ ಹಬ್ಬ ಮುಗಿದ ಬಳಿಕ ಮಳೆ ಬರಬಹುದೆಂದು ಗ್ರಾಮಸ್ಥರು ನಂಬಿದ್ದಾರೆ. -ವಾಸು.