ಕರ್ನಾಟಕದಲ್ಲಿ ಬಿಸಿಲಿನ ತಾಪ ಏರುತ್ತಿರುವಂತೆಯೇ ಬಿಸಿಲಿನಷ್ಟೇ ಪ್ರಖರವಾಗಿ ಚುನಾವಣಾ ಕಾವೂ ಹೆಚ್ಚಾಗತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ೧೧೩ ಎಂಬ ಸಂಖ್ಯೆ ನಿದ್ದೆಗೆಡಿಸುತ್ತಿದೆ.
ಏನಿದು ೧೧೩? ಕರ್ನಾಟಕ ವಿಧಾನಸಭೆಯಲ್ಲಿ ೨೨೪ ಶಾಸಕರ ಸಂಖ್ಯೆಯಿದ್ದು, ಪಕ್ಷವೊಂದು ಬಹುಮತ ಪಡೆದು ಅಧಿಕಾರಕ್ಕೇರಲು ೧೧೩ ಶಾಸಕರ ಸಂಖ್ಯೆ ಅತ್ಯಗತ್ಯವಾಗಿದೆ. ಮುಂದಿನ ಸರ್ಕಾರ ರಚನೆಗೆ ಯಾವುದೇ ಪಕ್ಷಕ್ಕಾದರೂ ೧೧೩ ಮ್ಯಾಜಿಕ್ ಸಂಖ್ಯೆಯಾಗಿದೆ. ಇಷ್ಟೂ ಸಂಖ್ಯೆಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಂತ್ರಗಾರಿಕೆಯಲ್ಲಿ ನಿರತವಾಗಿದೆ.
ಐದು ವರ್ಷಗಳ ಬಳಿಕ ಮತ್ತೆ ಕನ್ನಡ ನಾಡು ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ. ಮೇ ೧೦ ರಂದು ಚುನಾವಣೆ ಮುಕ್ತಾಯಗೊಂಡು ೧೩ ರಂದು ಫಲಿತಾಂಶ ಪ್ರಕಟವಾಗಿ ಮೇ ೧೮ ರೊಳಗಾಗಿ ಹೊಸ ಸರ್ಕಾರ ರಚನೆಯಾಗಲೇಬೇಕಾಗಿದೆ. ಈ ಬಾರಿ ಒಂದೇ ಹಂತದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದು ವಿಶೇಷ.
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳೂ ಚುನಾವಣೆಗೆ ಭರದಿಂದ ಸಜ್ಜಾಗುತ್ತಿವೆ. ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಯಾವುದೇ ಗೊಂದಲ ಇಲ್ಲದಂತೆ ಎರಡು ಹಂತಗಳಲ್ಲಿ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ವ್ಯವಸ್ಥಿತ ರೀತಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಸೋಮವಾರದೊಳಗಾಗಿ ಹೆಸರು ಘೋಷಿಸಲು ಬಿಜೆಪಿ ಸಿದ್ಧವಾಗುತ್ತಿದೆ. ಜೆಡಿಎಸ್ ಈಗಾಗಲೇ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿ ಅಖೈರುಗೊಳಿಸಿದೆ. ಎಸ್.ಡಿ.ಪಿ.ಐ., ರೈತ ಸಂಘಗಳು ಕೂಡ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕಿಳಿಸಲು ಮುಂದಾಗುತ್ತಿದೆ. ಮಡಿಕೇರಿ ಕ್ಷೇತ್ರ ಸೇರಿದಂತೆ ರಾಜ್ಯದ ಕೆಲವೊಂದು ಕ್ಷೇತ್ರಗಳಲ್ಲಿ ಎಸ್.ಡಿ.ಪಿ.ಐ. ರೈತ ಸಂಘ ಅಭ್ಯರ್ಥಿಗಳ ಹೆಸರು ಘೋಷಿಸಿವೆ.
ಈ ಬಾರಿಯ ಚುನಾವಣೆ ಸಾಕಷ್ಟು ರೋಚಕವಾಗಿರಲಿದೆ. ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೇರಲು ತಂತ್ರಗಾರಿಕೆ ರೂಪಿಸುತ್ತಿದ್ದರೆ, ೫ ವರ್ಷಗಳ ಬಳಿಕ ಮತ್ತೆ ರಾಜ್ಯದ ಅಧಿಕಾರ ಪಡೆಯಲು ಕಾಂಗ್ರೆಸ್ ಕೂಡ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಸಜ್ಜಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಜೆಡಿಎಸ್ ಅಗತ್ಯ ಸಿದ್ಧತೆಗೆ ತಯಾರಿ ನಡೆಸಿವೆ.
ಬಿಜೆಪಿ ತಂತ್ರಗಾರಿಕೆ
ದೇಶದ ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವAತೆ ಬಿಜೆಪಿ ಕರ್ನಾಟಕದಲ್ಲಿಯೂ ಈ ಸಲ ತನ್ನದೇ ತಂತ್ರಗಾರಿಕೆ ರೂಪಿಸಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ಪದೇ ಪದೇ ಕರ್ನಾಟಕಕ್ಕೆ ಕರೆಯಿಸಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಬಿಜೆಪಿ ಪರ ಅಲೆಯನ್ನು ಸೃಷ್ಟಿಸಲಾಗುತ್ತದೆ. ಮೋದಿ, ಅಮಿತ್ ಶಾ, ಯೋಗಿ ಕರ್ನಾಟಕದ ವಿವಿಧೆಡೆ ಮುಂದಿನ ದಿನಗಳಲ್ಲಿ ೧೫ ದಿನಗಳ ಕಾಲ ಪ್ರಚಾರ ಕೈಗೊಳ್ಳಲಿದ್ದಾರೆ. ಚುನಾವಣಾ ತಂತ್ರಗಾರಿಕೆಯಲ್ಲಿ ಚಾಣಕ್ಯ ಎಂದೇ ಖ್ಯಾತವಾಗಿರುವ ಅಮಿತ್ ಶಾ ಈಗಾಗಲೇ ಹಲವಾರು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಅಗತ್ಯ ತಂತ್ರಗಳನ್ನು ಹೆಣೆದಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿಯೇ ಲಿಂಗಾಯಿತ, ಒಕ್ಕಲಿಗ, ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಘೋಷಿಸಿರುವುದು ಕೂಡ ಈ ತಂತ್ರಗಾರಿಕೆಯ ಪ್ರಮುಖ ಅಂಗವಾಗಿದೆ. ಹಿಂದುತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಮೀಸಲಾತಿ ರದ್ದುಗೊಳಿಸಿ ಆ ಮೀಸಲಾತಿ ಪ್ರಮಾಣವನ್ನೇ ಲಿಂಗಾಯಿತ, ಒಕ್ಕಲಿಗರಿಗೆ ಹಂಚುವ ಮೂಲಕ ಆ ಸಮುದಾಯಗಳ ಮತಗಳಿಗೆ ಗುರಿ ಇರಿಸಲಾಗಿದೆ. ಮುಸಲ್ಮಾನರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ನಿರ್ಧಾರಕ್ಕೆ ಬಂದAತಿರುವ ಬಿಜೆಪಿ ವರಿಷ್ಠರು ರಾಜ್ಯದ ಪ್ರಮುಖ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗರೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಯಾವುದೇ ಸರ್ಕಾರ ೫ ವರ್ಷಗಳ ಅಧಿಕಾರ ಪೂರ್ಣಗೊಳಿಸಿದಾಗ ಸ್ವಲ್ಪಮಟ್ಟಿಗಾದರೂ ಆಡಳಿತ ವಿರೋಧಿ ಅಲೆ ಕಂಡು ಬರುತ್ತದೆ. ಇಂತಹ ಅಲೆಯನ್ನು ಮಟ್ಟ ಹಾಕಲು ಬಿಜೆಪಿ ವರಿಷ್ಠರು ಸಾಕಷ್ಟು ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಆಡಳಿತ ವಿರೋಧಿ ಅಲೆ ವಿರುದ್ಧ ಮೋದಿ ಪ್ರಭಾವದ ಅಲೆಯನ್ನು ಸೃಷ್ಟಿಸುವುದೇ ಈ ಪೈಕಿ ಆದ್ಯತೆಯಂತಿದೆ.
ಅಭ್ಯರ್ಥಿಯನ್ನು ಆಯ್ಕೆಗೊಳಿಸುವಲ್ಲಿ ಬಿಜೆಪಿ ಅಂತಹ ಕಸರತ್ತು ಮಾಡುತ್ತಿಲ್ಲ. ಯಾಕೆಂದರೆ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾಕು ಎಂಬ ನಿಲುವು ತಳೆದಿರುವ ಕಮಲ ಪಾಳಯ, ಹೊಸ ಮುಖಗಳನ್ನು ಕಣಕ್ಕಿಳಿಸಿ ಪ್ರಯೋಗದ ರಿಸ್ಕ್ಗೆ ಸಿದ್ಧವಿಲ್ಲ. ಅಂತೆಯೇ ಚುನಾವಣೆ ಎಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹಣ ವೆಚ್ಚಮಾಡಲೇಬೇಕು. ಇಂತಹ ಸಾಮರ್ಥ್ಯವಿರುವ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದಂತಿದೆ. ಕ್ಷೇತ್ರಗಳಲ್ಲಿ ಬದಲಾವಣೆ ಬೇಕು, ಹೊಸ ಮುಖಗಳಿಗೆ ಆದ್ಯತೆ ನೀಡಿ ಎಂಬ ಕೂಗಿಗೆ ಈ ಬಾರಿ ಮನ್ನಣೆ ದೊರಕುವುದು ಕಷ್ಟ ಸಾಧ್ಯ.
ಕರ್ನಾಟಕದ ಫಲಿತಾಂಶ ಮುಂದಿನ ವರ್ಷದ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿರುವುದರಿಂದಾಗಿ ಬಿಜೆಪಿ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿರಿಸಿದೆ. ಶತಾಯಗತಾಯ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲೇಬೇಕು ಎಂಬ ಸಂಕಲ್ಪ ತೊಟ್ಟಿದೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್‌ನಿAದ ೧೮ ಶಾಸಕರನ್ನು ಹೇಗೆಲ್ಲ ಕಸರತ್ತು ನಡೆಸಿ ಪಕ್ಷಕ್ಕೆ ಬರಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲೇಬೇಕು ಎಂಬ ಗುರಿ ಹೊಂದಲಾಗಿದೆ. ಈ ಮೂಲಕ ಬಿಜೆಪಿ ಪ್ರಬಲವಾಗಿದೆ ಎಂಬ ಸಂದೇಶವನ್ನು ರಾಷ್ಟçವ್ಯಾಪಿ ಸಾರುವ ಉದ್ದೇಶ ಕಮಲಪಡೆಯದ್ದು.
ಕೈ ತಯಾರಿ
ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಹಿಂದಿನ ಎಲ್ಲಾ ಚುನಾವಣೆಗಿಂತ ಅತ್ಯಂತ ಪೂರ್ವಸಿದ್ಧತೆಯೊಂದಿಗೆ ವ್ಯವಸ್ಥಿತವಾಗಿ ಸಿದ್ದವಾಗಿದೆ. ಪ್ರತೀ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳ ಆಯ್ಕೆಯನ್ನು ಅತ್ಯಂತ ಜಾಗ್ರತೆಯಿಂದ ಮಾಡಲಾಗುತ್ತಿದೆ. ಸಾಕಷ್ಟು ಸಮೀಕ್ಷೆ ಕೈಗೊಂಡು, ಕಾಂಗ್ರೆಸ್‌ಅನ್ನು ತಳಮಟ್ಟದಿಂದಲೇ ಪ್ರಬಲಗೊಳಿಸುವ ಮೂಲಕ ಯಾವುದೇ ತಾಪತ್ರಯಗಳಿಗೆ ಅವಕಾಶ ಇಲ್ಲದಂತೆ ಗೆಲುವಿಗೆ ಸಿದ್ಧತೆಯನ್ನು ಕೈಪಡೆ ಮಾಡಿಕೊಂಡಿದೆ. ರಣದೀಪ್ ಸಿಂಗ್ ಸುರ್ಜಿವಾಲ ಎಂಬ ಡೈನಮಿಕ್ ನಾಯಕ ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ಠಿಕಾಣಿ ಹೂಡಿದ್ದು ತನ್ನ ಬಿಗಿಯಾದ ಮತ್ತು ಖಡಕ್ ನಿಲುವುಗಳ ಮೂಲಕ ಕೈ ನಾಯಕರಲ್ಲಿ ಭಿನ್ನಮತ ಬಾರದಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಅಬ್ಬರಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಲೂ ಸುರ್ಜಿವಾಲ ಪಡೆ ಮುಂದಾಗಿದೆ. ಜತೆಗೆ ಎಐಸಿಸಿ ಪ್ರಮುಖರಾದ ವೇಣುಗೋಪಾಲ್, ಕೆಪಿಸಿಸಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಹಳೇ ತಲೆಗಳೂ ಟೊಂಕಕಟ್ಟಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಾರದೇ ಹೋದಲ್ಲಿ ಮುಂದಿನ ದಿನಗಳು ಕೈ ಪಾಳಯಕ್ಕೆ ಕಷ್ಟ ಎಂಬುದನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದಾರು ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ತಡೆಯೊಡ್ಡಲು ಬಿಜೆಪಿ, ಜೆಡಿಎಸ್ ಮುಂದಾಗಿವೆ. ಕೋಲಾರದಲ್ಲಿ ಸ್ಪರ್ಧಿಸಲು ಬಯಸಿದ್ದ ಸಿದ್ದರಾಮಯ್ಯ ಅವರಿಗೆ ಒಳ ಏಟುಗಳ ಮೂಲಕ ಸೋಲಿನ ಕಹಿ ಉಣಿಸಲು ಜೆಡಿಎಸ್, ಬಿಜೆಪಿ ಮುಂದಾಗಿದೆ ಹಾಗೂ ಈ ತಂತ್ರ ಫಲಿಸಲಿದೆ ಎಂಬ ಸೂಕ್ಷö್ಯ ಎಐಸಿಸಿಗೆ ದೊರಕಿತ್ತೋ ನಯವಾಗಿಯೇ ಕ್ಷೇತ್ರ ಬದಲಿಸುವಂತೆ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿ ಮೈಸೂರಿನ ವರುಣದಲ್ಲಿ ಅವಕಾಶ ನೀಡಲಾಗಿದೆ.
ಸದ್ಯಕ್ಕೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಯಾರು ಎಂದು ಘೋಷಿಸುವ ಗೋಜಿಗೆ ಹೋಗಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರಬಲ ಆಕಾಂಕ್ಷಿಗ ಳಾಗಿದ್ದರೂ ಮೊದಲು ಅಧಿಕಾರಕ್ಕೆ ಪಕ್ಷವನ್ನು ತನ್ನಿ. ಅನಂತರ ನಾವು ಮುಂದೇನು ಎಂಬುದನ್ನು ನಿರ್ಧರಿಸುತ್ತೇವೆ ಎಂಬ ಸಂದೇಶ ರವಾನಿಸಿದೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಪ್ರಬಲವಾಗಿರುವ ಸಿದ್ದು ಬಣ, ಡಿಕೆಶಿ ಬಣಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡುವಲ್ಲಿ ಕೈ ವರಿಷ್ಠರು ಯಶಸ್ವಿಯಾಗಿದ್ದಾರೆ. ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ, ಹಿಂದುಳಿದ ವರ್ಗಕ್ಕೆ ಮೊದಲ ಪಟ್ಟಿಯಲ್ಲಿ ಯೋಗ್ಯ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಚುನಾವಣೆಯ ರಣಕಹಳೆ ಊದಿದೆ. ಬಿಜೆಪಿ ತಂತ್ರಗಾರಿಕೆಗೆ ಸೂಕ್ತ ಪ್ರತಿತಂತ್ರಗಳನ್ನೂ ಕಾಂಗ್ರೆಸ್ ಹೂಡುತ್ತಿದ್ದು ಸರಿಯಾದ ಸ್ಪರ್ಧೆ ನೀಡಲು ಮುಂದಾಗಿದೆ.
ಜೆಡಿಎಸ್ ಕಿಂಗ್ ಮೇಕರ್?
ಯಾರು ಏನೇ ಹೇಳಿದರೂ ಜೆಡಿಎಸ್ ಈ ಬಾರಿ ಗೆಲುವಿನ ಗುರಿಯಿಟ್ಟಿರುವುದು ೨೫ ಪ್ಲಸ್ ಸ್ಥಾನಗಳಿಗೆ ಎಂಬುದು ಸ್ಪಷ್ಟ. ಸದ್ಯದ ಸಮೀಕ್ಷೆಗಳೆಲ್ಲಾ ಈ ಬಾರಿ ಯಾವುದೇ ಪಕ್ಷ ಬಹುಮತ ಪಡೆಯಲಾರದು. ಅತಂತ್ರ ಸಂಖ್ಯೆಯ ಸಾಧ್ಯತೆಯೇ ಹೆಚ್ಚು ಎಂದು ಹೇಳುತ್ತಿರುವಾಗ ಕುಮಾರಸ್ವಾಮಿ ಸುಮ್ಮನಿರಲು ಸಾಧ್ಯವೇ?
ಕಿಂಗ್ ಮೇಕರ್ ಆಗುವ ಮೂಲಕ ಸುಲಭವಾಗಿ ಅಧಿಕಾರದ ಲಾಭ ಪಡೆಯಲು ಯೋಜನೆ ರೂಪಿಸುತ್ತಿರುವ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಣ ಅದಕ್ಕಾಗಿ ೨೫ ಗ್ಯಾರಂಟಿ ಸ್ಥಾನಗಳಲ್ಲಿ ಗೆಲುವಿಗೆ ಮುಂದಾಗಿದೆ. ಸದ್ಯದ ಸ್ಥಿತಿಯಲ್ಲಿ ಜೆಡಿಎಸ್ ೨೫ ಸ್ಥಾನಗಳನ್ನು ನಿರಾಯಸವಾಗಿ ಗೆಲ್ಲುವ ಸಾಧ್ಯತೆಯಿದೆ. ಅತಂತ್ರ ವಿಧಾನಸಭೆಯ ಸ್ಥಿತಿ ಕಂಡುಬAದಲ್ಲಿ ಈ ೨೫ ಸ್ಥಾನಗಳನ್ನು ಮುಂದಿಟ್ಟುಕೊAಡು ಕುಮಾರಸ್ವಾಮಿ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕಿಂಗ್ ಮೇಕರ್ ಆಗಲಿದ್ದಾರೆಯೋ ಎಂಬ ಕುತೂಹಲ ಇದೆ.
ಹೀಗಾಗಿಯೇ ಬಿಜೆಪಿ, ಕಾಂಗ್ರೆಸ್ ನಿರೀಕ್ಷಿತ ರೀತಿಯಲ್ಲಿ ಜೆಡಿಎಸ್ ವಿರುದ್ದ ಕಿಡಿಕಾರುತ್ತಿಲ್ಲ. ಸಾಫ್ಟ್ ಕಾರ್ನರ್ ಇಟ್ಟುಕೊಂಡೇ ಬೇಕೋ ಬೇಡವೋ ಎಂಬAತೆ ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತಿವೆ. ಯಾರಿಗೆ ಗೊತ್ತು .. ಯಾರ ಪಾಲಿಗೆ ಜೆಡಿಎಸ್ ಫಲಿತಾಂಶದ ಬಳಿಕ ಅತ್ಯಂತ ಅನಿವಾರ್ಯ ಆಗಲಿದೆಯೋ?!
ಎಸ್‌ಡಿಪಿಐ, ಆಮ್‌ಆದ್ಮಿ, ಸರ್ವೋದಯ ಪಕ್ಷ, ಕಮ್ಯೂನಿಸ್ಟ್ ಪಕ್ಷಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಮತ ವಿಭಜನೆ ಮಾಡುತ್ತಾ ಯಾರ ಗೆಲುವಿಗೆ ತೊಡಕಾಗಲಿದೆ ಎಂಬುದನ್ನು ನಿರ್ಧರಿಸಲು ಕಾಲಪಕ್ವವಾಗಿಲ್ಲ. ಆದರೆ ಈ ಪಕ್ಷಗಳ ಗಂಭೀರ ಸ್ಪರ್ಧೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದಂತೂ ಖಂಡಿತಾ.
ಕರ್ನಾಟಕದ ಚುನಾವಣಾ ಫಲಿತಾಂಶವನ್ನೇ ದೇಶವ್ಯಾಪಿ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ವಿಫಲವಾದರೆ ಕಾಂಗ್ರೆಸ್ ಸೇರಿದಂತೆ ಬಿಜೆಪಿಯ ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತç ಲೋಕಸಭಾ ಚುನಾವಣೆಗೆ ದೊರಕಿದಂತಾಗುತ್ತದೆ. ಅಂತೆಯೇ ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದಲ್ಲಿ ನೋಡಿ ಮತದಾರ ಬಿಜೆಪಿಯತ್ತಲೇ ಒಲವು ಹೊಂದಿದ್ದಾನೆ ಎಂಬ ಸಂದೇಶವನ್ನು ದೇಶವ್ಯಾಪಿ ಸಾರಿದಂತಾಗುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಮತ್ತೊಮ್ಮೆ ರಾಜಕೀಯದ ಪಡಸಾಲೆಯಲ್ಲಿ ಕುದುರೆ ವ್ಯಾಪಾರ ಜೋರಾಗಿ ನಡೆಯಲಿದೆ. ಮತ್ತೊಮ್ಮೆ ಶಾಸಕರ ಖರೀದಿ, ಶಾಸಕರ ರೆಸಾರ್ಟ್ ರಾಜಕೀಯ ಬಿರುಸಾಗಲಿದೆ.
ಹಿಂದುತ್ವದ ಆಧಾರದ ಮೇಲೆ ಸಂಘ ಪರಿವಾರವನ್ನು ಬೆಂಬಲಿಕ್ಕಿಟ್ಟುಕೊAಡು ಮತದಾರನ ಮುಂದೆ ಸಾಗುವ ಬಿಜೆಪಿ, ಕೋಮುಸೌಹಾರ್ದತೆಯ ಆಧಾರದಲ್ಲಿ ಈಗಿರುವ ಪಕ್ಷವನ್ನು ಅಧಿಕಾರದಿಂದ ಬದಲಾವಣೆ ಮಾಡಿ ಎಂದು ಕೋರುತ್ತಾ ಮತಯಾಚಿಸುತ್ತಿರುವ ಕಾಂಗ್ರೆಸ್, ಅಳೆದು, ತೂಗಿ ಸಾಕಷ್ಟು ಲೆಕ್ಕಾಚಾರದೊಂದಿಗೆ ಚುನಾವಣೆಯ ಕಣಕ್ಕಿಳಿದಿರುವ ಜೆಡಿಎಸ್ - ಈ ಮೂರೂ ಪ್ರಮುಖ ಪಕ್ಷಗಳೊಂದಿಗೆ, ಪಕ್ಷೇತರರು, ರೈತಸಂಘ, ಕಮ್ಯೂನಿಸ್ಟ್, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷಗಳು ಚುನಾವಣೆಯಲ್ಲಿ ನಿರ್ಣಾಯಕವಾಗಿವೆ.
ಏಪ್ರಿಲ್, ಮೇ ತಿಂಗಳ ಬಿಸಿಲಿನ ಝಳಕ್ಕೆ ಈ ಬಾರಿ ಚುನಾವಣಾ ಕಣದ ಕಾವೂ ಸೇರಿಕೊಂಡು ಮತ್ತಷ್ಟು ಪ್ರಖರತೆಯನ್ನು ಮತದಾರರಿಗೆ ನೀಡಲಿದೆ. ಪಕ್ಷಗಳ ಅಭ್ಯರ್ಥಿಗಳು, ನಾಯಕರು, ಕಾರ್ಯಕರ್ತರ ಪಾಲಿಗೆ ನಿಜಕ್ಕೂ ಬೆವರು ತರಿಸುವ ಚುನಾವಣೆ ಇದಾಗಲಿದೆ. ಸದ್ಯಕ್ಕಂತೂ ಮೇ ೧೩ ರವರೆಗೆ ಎಲ್ಲಾ ಪಕ್ಷಗಳ ನಾಯಕರಿಗೂ ೧೧೩ ಸಂಖ್ಯೆ ಕನ್ನಡಿಯೊಳಗಿನ ಗಂಟಾಗಿದೆ. - ಅನಿಲ್ ಎಚ್.ಟಿ.