ಕಣಿವೆ, ಏ. ೯: ಕುಶಾಲನಗರ ಪುರಸಭೆ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿರುವ ಊರಿನ ಏಕೈಕ ಹಾಗೂ ಸುಂದರವಾಗಿ ರೂಪುಗೊಂಡಿದ್ದ ಉದ್ಯಾನವನ ಇದೀಗ ದನಗಳ ಪಾಲಾದಂತಿದೆ.
ಯಾವಾಗ ನೋಡಿದರೂ ಉದ್ಯಾನವನದಲ್ಲಿ ಬೀಡಾಡಿ ದನಗಳು ಅಲ್ಲಿನ ಹುಲ್ಲು ಹಾಗೂ ಸೊಪ್ಪು ಸದೆಗಳನ್ನು ತಿನ್ನುತ್ತಾ ಅಡ್ಡಾಡುತ್ತಿರುತ್ತವೆ. ಹಾಗಾಗಿ ಈ ಉದ್ಯಾನ ಊರಿನ ಜನಗಳಿಗೋ ಇಲ್ಲವೇ ಗೋವುಗಳಿಗೋ ಎಂಬAತಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ. ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಸುಂದರವಾಗಿ ರೂಪುಗೊಂಡಿದ್ದ ಈ ಉದ್ಯಾನವನ ಊರಿಗೆ ಒಂದು ಶೋಭೆಯಾಗಿತ್ತು. ಅಲ್ಲಿ ಆರಂಭದಲ್ಲಿ ಈ ಉದ್ಯಾನದಲ್ಲಿ ಊರಿನ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಅತ್ಯಂತ ಸಂತಸ ಹಾಗೂ ಸಂಭ್ರಮದಿAದ ಈ ಉದ್ಯಾನಕ್ಕೆ ಬಂದು ವಿಶ್ರಮಿಸಿ ಒಂದಷ್ಟು ಹರಟೆ ಹೊಡೆದು ತೆರಳುತ್ತಿದ್ದರು.
ಆದರೆ ಕ್ರಮೇಣ ಇಲ್ಲಿನ ಈ ವಾರ್ಡ್ನಿಂದ ಚುನಾಯಿತರಾಗುವ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ಉದ್ಯಾನ ಇಂದು ಉದ್ಯಾನವಾಗಿ ಉಳಿದಿಲ್ಲ.
ಹಗಲು ಜಾನುವಾರುಗಳ ಆಶ್ರಯತಾಣವಾದರೆ ರಾತ್ರಿ ಪುಂಡ ಪೋಕರಿಗಳ ಅಡ್ಡೆಯಾಗಿದೆ.
ನಿರ್ಮಾಣದ ಆರಂಭದಲ್ಲಿ ಸಸ್ಯಗಳು, ವೈವಿಧ್ಯಮಯ ಹೂಗಿಡಗಳಿಂದ ನೋಡುಗರಿಗೆ ಆಕರ್ಷಣೆಯಾಗಿದ್ದ ಈ ತಾಣ ಇಂದು ಬೀಡಾಡಿ ದನಗಳ ತಾಣವಾಗಿದೆ.
ಮಕ್ಕಳು ಅಮ್ಮ ಪಾರ್ಕ್ಗೆ ಹೋಗಿ ಆಟವಾಡಿ ಬರ್ತೇನೆ ಅಂತಾ ಏನಾದರೂ ಹೇಳಿದರೆ, ‘ಅಯ್ಯೋ ಅಲ್ಲಿಗೆ ಬೇಡ ಕಣಪ್ಪಾ, ಅಲ್ಲಿ ಬೀಡಾಡಿ ದನಗಳಿವೆ. ಏನಾದರೂ ಮಾಡಿಬಿಟ್ಟಾವು ಜೋಕೆ... ಅಲ್ಲಿಗೆ ಬೇಡಪ್ಪಾ’ ಎಂದು ಹೇಳುವಂತಹ ಸ್ಥಿತಿಗೆ ಈ ಉದ್ಯಾನ ತಲುಪಿದೆ.
ಊರಿನ ಏಕೈಕ ಉದ್ಯಾನವನವನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಅಭಿವೃದ್ಧಿಪಡಿಸಲು ಮುಂದಾಗಬೇಕು. ಈ ಉದ್ಯಾನದ ಪ್ರವೇಶ ದ್ವಾರಕ್ಕೆ ಜಾನುವಾರುಗಳು ತೆರೆಯಲು ಅಸಾಧ್ಯವಾದ ಸುತ್ತಲು ತಿರುಗುವ ಗೇಟು ಅಳವಡಿಸಬೇಕು. ಬೆಳಿಗ್ಗೆ ಹಾಗೂ ಸಂಜೆ ಒಂದು ಸಮಯ ನಿಗದಿಪಡಿಸಿ ಓರ್ವ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಹೂಗಿಡಗಳಿಗೆ, ಹಸಿರೆಲೆ ಸಸ್ಯರಾಶಿಗಳಿಗೆ ನೀರು ಹಾಕಿ ನಿರ್ವಹಿಸಿದರೆ ಉದ್ಯಾನ ಮತ್ತಷ್ಟು ಆಕರ್ಷಣೆಗೊಳ್ಳುತ್ತದೆ ಎಂದು ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇದೂವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಬಿಎಸ್ಆರ್ ಜಗದೀಶ್ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ.
ಪುರಸಭೆ ಅಧ್ಯಕ್ಷ ಜಯವರ್ಧನ ಹಾಗೂ ಸ್ಥಳೀಯ ವಾರ್ಡ್ ಸದಸ್ಯ ಜಗದೀಶ್ ಅವರು ಈ ಉದ್ಯಾನವನದ ಅಭಿವೃದ್ಧಿ ಹಾಗೂ ಸರಿಯಾದ ನಿರ್ವಹಣೆಯ ಮೂಲಕ ಬಲವರ್ಧನೆಗೆ ಮುಂದಾಗಬೇಕಿದೆ.
ಈಗ ಈ ಉದ್ಯಾನದಲ್ಲಿ ಒಂದೇ ಒಂದು ಆಕರ್ಷಕವಾದ ಹಸಿರೆಲೆಯ ಗಿಡವಿಲ್ಲ. ಹೂಗಿಡಗಳಂತೂ ಇಲ್ಲವೇ ಇಲ್ಲ. ಪುರಸಭೆ ವ್ಯಾಪ್ತಿಯ ಬಹಳಷ್ಟು ಬಡಾವಣೆಗಳಲ್ಲಿ ಇರುವ ಇತರೇ ಸಣ್ಣ ಪುಟ್ಟ ಉದ್ಯಾನವನಗಳು ಕೂಡ ಅಭಿವೃದ್ಧಿಯಾಗದ ಕಾರಣ ಅಲ್ಲಿನ ಮಕ್ಕಳ ಆಟದ ಮೈದಾನವಾಗಿ ಮಾರ್ಪಟ್ಟಿವೆ.
ಊರಲ್ಲಿದ್ದ ಈ ಕಾವೇರಿ ಬಡಾವಣೆಯ ಏಕೈಕ ಉದ್ಯಾನವನ್ನು ದನಗಳಿಂದ ಮುಕ್ತಗೊಳಿಸಿ ಜನಾಕರ್ಷಣೆಗೆ ಯೋಜನೆ ರೂಪಿಸಬೇಕಿದೆ.
ವರದಿ: ಕೆ.ಎಸ್. ಮೂರ್ತಿ