ಮಡಿಕೇರಿ, ಏ. ೮: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಯಾರೆಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಏನಿದ್ದರೂ ಪಕ್ಷದ ಕೇಂದ್ರ ವರಿಷ್ಠರ ತೀರ್ಮಾನವೇ ಅಂತಿಮವಾಗಲಿರುವುದರಿAದ ಯಾವುದೇ ಗುಟ್ಟು ಬಯಲಾಗುತ್ತಿಲ್ಲ. ಇದೀಗ ರಾಜ್ಯ ಹಾಗೂ ಕೇಂದ್ರದ ಪ್ರಮುಖರು ಪಟ್ಟಿಯನ್ನು ಅಂತಿಮಪಡಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಬಿಜೆಪಿ ಈ ಬಾರಿ ಅಳೆದು... ತೂಗಿ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸುತ್ತಿದ್ದು, ಇಡೀ ರಾಜ್ಯದಲ್ಲೇ ಬಿಜೆಪಿ ಪಟ್ಟಿ ಬಗ್ಗೆ ಕೌತುಕ ಹೆಚ್ಚಾಗುತ್ತಿದೆ. ಇದೀಗ ಬಹುತೇಕ ಎಲ್ಲಾ ಕ್ಷೇತ್ರಗಳಿಂದ ತಲಾ ಮೂರು ಹೆಸರು ಅಂತಿಮವಾಗಿದೆ ಎನ್ನಲಾಗಿದ್ದು, ಇವರುಗಳಲ್ಲಿ ಒಬ್ಬರು ಅವಕಾಶ ಪಡೆಯಲಿದ್ದಾರೆ. ಕೊಡಗಿನಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಹಾಲಿ ಶಾಸಕ ಕೆ.ಜಿ. ಬೋಪಯ್ಯ, ಎ.ಕೆ. ಮನುಮುತ್ತಪ್ಪ ಹಾಗೂ ರವಿ ಕುಶಾಲಪ್ಪ ಅವರ ಹೆಸರು ಅಂತಿಮಪಟ್ಟಿಯಲ್ಲಿರುವುದಾಗಿ ಹೇಳಲಾಗಿದೆ. ಒಂದು ವೇಳೆ ಹಾಲಿ ಶಾಸಕರನ್ನು ಬದಲಿಸಿದರೆ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ರವಿ ಕುಶಾಲಪ್ಪ ಮಡಿಕೇರಿ ಮೂಲದವರಾದರೆ, ಮನು ಮುತ್ತಪ್ಪ ವೀರಾಜಪೇಟೆ ಕ್ಷೇತ್ರದ ಮತದಾರರೇ ಆಗಿದ್ದಾರೆ ಎಂಬುದು ಮತ್ತೊಂದು ವಿಚಾರವಾಗಿದ್ದು, ಮೂವರಲ್ಲಿ ಯಾರು ಎಂಬುದು ಪ್ರಸ್ತುತದ ಚರ್ಚೆಯಾಗಿದೆ.
ಇನ್ನು ಮಡಿಕೇರಿ ಕ್ಷೇತ್ರದಿಂದಲೂ ಮೂವರ ಹೆಸರು ಅಂತಿಮ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ. ಇವರಲ್ಲಿ ಹಾಲಿ ಶಾಸಕರಾಗಿರುವ ಅಪ್ಪಚ್ಚುರಂಜನ್ ಅವರು ಸೇರಿದ್ದು, ಇವರೊಂದಿಗೆ ಬಿ.ಬಿ. ಭಾರತೀಶ್ ಹಾಗೂ ಡಾ|| ಬಿ.ಸಿ. ನವೀನ್ ಕುಮಾರ್ ಅವರ ಹೆಸರಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿAದ ಡಾ|| ಮಂಥರ್ಗೌಡ ಹೊಸ ಮುಖವಾಗಿ ರುವುದರಿಂದ ಇವರ ವಿರುದ್ಧ ಸ್ಪರ್ಧಿಸಿ ಜಯ ಗಳಿಸುವವರಾರು ಎಂಬ ಅಂಶ ಪ್ರಾಮುಖ್ಯತೆ ಪಡೆದಿದ್ದು, ಇದರಂತೆ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎನ್ನಲಾಗುತ್ತಿದೆ.