ಪೊನ್ನಂಪೇಟೆ, ಏ. ೮: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿದಾಳಿ ಮುಂದು ವರೆದಿದ್ದು ಪೊನ್ನಂಪೇಟೆ ತಾಲೂಕಿನ ಬಾಳೆಲೆ ಸಮೀಪದ ದೇವನೂರು ಗ್ರಾಮದ ಕಾಂಡೆರ ರಮೇಶ್ ಚಿಟ್ಟಿಯಪ್ಪ ಎಂಬವರಿಗೆ ಸೇರಿದ ಹಾಲು ಕೆರೆಯುವ ಹಸು ಹುಲಿ ದಾಳಿಗೆ ಬಲಿಯಾಗಿದೆ.

ತಾ.೭ ರಂದು ಮನೆಯ ಸಮೀಪ ಮೇಯಲು ಬಿಟ್ಟಿದ್ದ ಹಸು ಕಾಣೆಯಾಗಿತ್ತು. ಇಂದು ಬೆಳಗ್ಗೆ ಹಸುವಿನ ಕಳೇಬರ ಮನೆಯ ಅನತಿದೂರದಲ್ಲಿ ಪತ್ತೆಯಾಗಿದೆ. ಇದರ ಜೊತೆ ಇದ್ದ ೨ ವರ್ಷ ಪ್ರಾಯದ ಕರು ಕೂಡ ಕಾಣೆಯಾಗಿದ್ದು, ಕರುವನ್ನು ಕೊಂದು ಹಾಕಿರುವ ಹುಲಿ ಅದನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ.

ಘಟನೆ ನಡೆದ ಸ್ಥಳಕ್ಕೆ ಆನೆ ಚೌಕೂರು ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ನಂದನ್ ಕುಮಾರ್, ಸಿಬ್ಬಂದಿ ಪ್ರಶಾಂತ್, ತಿತಿಮತಿ ಅರಣ್ಯ ವಲಯ ಸಿಬ್ಬಂದಿ ರೇವಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲಾಧಿಕಾರಿಗಳಿಗೆ ತಿಳಿಸಿ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಹಸುವಿನ ಕಳೇಬರ ಸಮೀಪ ಹುಲಿ ಗುರುತು ಪತ್ತೆಗಾಗಿ ಕ್ಯಾಮರ ಅಳವಡಿಸಿ ತೆರಳಿದ್ದಾರೆ. ಹುಲಿ ದಾಳಿಯಿಂದ ಹಸುಕಳೆದು ಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. -ಚನ್ನನಾಯಕ