ಮುಳ್ಳೂರು, ಏ. ೭: ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ.ವ್ಯಾಪ್ತಿಯ ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೋಣಿಗನಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ತಾಯಿಯವರ ೫೧ನೇ ವರ್ಷದ ಪೂಜಾ ಮಹೋತ್ಸವ ಸಂಪನ್ನಗೊAಡಿತು.
ಕೊಡಗು ಪ್ರತೇಕ ರಾಜ್ಯವಾಗಿದ್ದಾಗ ೧೯೫೨ರಲ್ಲಿ ಈಗಿನ ಬೆಸೂರು ಗ್ರಾ.ಪಂ.ಗೆ ಸೇರಿದ ಕೋಣಿಗನಹಳ್ಳಿ ಗ್ರಾಮದವರಾದ ಪಿ.ಕೆ.ಚನ್ನಯ್ಯ ಅವರು ೧೯೫೨ರಲ್ಲಿ ಶಾಸಕರಾಗಿದ್ದರು ಅವರ ಪುತ್ರ ದಿ.ಕೆ.ಸಿ.ಪಿತಾಂಬರ ಅವರು ೧೯೭೨ ರಲ್ಲಿ ಗ್ರಾಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಗುಡಿಯನ್ನು ಸ್ಥಾಪನೆ ಮಾಡಿದ್ದರು. ಈ ಮನೆತನದವರು ಬೆಸೂರು ಗ್ರಾ.ಪಂ.ಯ ೨೨ ಹಳ್ಳಿಗಳ ಜೊತೆಯಲ್ಲಿ ಕಳೆದ ೫೧ ವರ್ಷಗಳಿಂದ ಶ್ರೀ ದುರ್ಗಾಪರಮೇಶ್ವರಿ ತಾಯಿಯವರ ಜಾತ್ರಾಮಹೋತ್ಸವವನ್ನು ಸಂಭ್ರಮದಿAದ ಆಚರಿಸುತ್ತಾರೆ. ಪಿ.ಕೆ.ಚನ್ನಯ್ಯ ಅವರ ತಂದೆ ಲಕ್ಕಯ್ಯ ಅವರು ಇದೇ ಗ್ರಾಮದಲ್ಲಿ ಪ್ರತಿವರ್ಷ ಪೂಜಾ ಕೈಂಕರ್ಯಗಳನ್ನು ನಡೆಸುವುದರ ಮೂಲಕ ಅವರ ತಲೆಮಾರಿನವರ ಸಮ್ಮುಖದಲ್ಲಿ ಈಗ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಕೋಣಿಗನಹಳ್ಳಿ ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ದೇವರ ಸಾನಿಧ್ಯದಲ್ಲಿ ಪೂಜೆ, ಹೋಮ ಹವನ ಮಂಗಳಾರತಿ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಶುಕ್ರವಾರ ಜಾತ್ರೋತ್ಸವವನ್ನು ನಡೆಸಲಾಯಿತು. ಗಂಗಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ ಮತ್ತು ಅರ್ಚನೆ ಕಾರ್ಯ ನಡೆಯಿತು. ಊರಿನ ಮುಖ್ಯ ಬೀದಿಗಳಲ್ಲಿ ಕೀಲು ಕುದುರೆ ಕುಣಿತ, ವೀರಗಾಸೆ ಕುಣಿತ, ನಗಾರಿ ವಾದ್ಯ ಮತ್ತು ಕಳಸದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯನ್ನು ನಡೆಸಲಾಯಿತು. ದೇವಿಯ ಸಾನಿಧ್ಯದಲ್ಲಿ ಮುತೈದೆಯರಿಗೆ ಮಡಲಕ್ಕಿ ಅರ್ಪಣಾ ಪೂಜಾ ಕಾರ್ಯದ ಬಳಿಕ ಹಣ್ಣುಕಾಯಿ ಪೂಜಾ ಕಾರ್ಯ ಮತ್ತು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ೪ ಗಂಟೆಗೆ ದೇವಿಯ ಸಾನಿಧ್ಯದಲ್ಲಿ ಕೆಂಡೋತ್ಸವ ಕಾರ್ಯ ನೆರವೇರಿಸಿದ ದೇವಸ್ಥಾನದಲ್ಲಿ ದೀಪೋತ್ಸವ ಬೆಳಕಿನ ಮೂಲಕ ಕೋಣಿಗನಹಳ್ಳಿ ಶ್ರೀ ದುರ್ಗಾಪರಮೇಶ್ವರಿ ತಾಯಿಯವರ ವಾರ್ಷಿಕ ಪೂಜಾಮಹೋತ್ಸವ ಸಂಪನ್ನಗೊAಡಿತು. ಜಾತ್ರಾಮಹೋತ್ಸವದಲ್ಲಿ ಅಕ್ಕಪಕ್ಕದ ೨೨ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.