ಕಣಿವೆ, ಏ. ೬: ಹೌದು ಮಟ ಮಟ ಮಧ್ಯಾಹ್ನ.... ಧರೆಯನ್ನು ಸುಡುವ ಬಿಸಿಲ ಧಗೆ...

ಮೇಯೋಣವೆಂದರೆ ಎಲ್ಲೂ ಕಾಣದ ಹಸಿರ ಹುಲ್ಲ ಹೊದಿಕೆ....

ಹಾಗಾಗಿ ಮುಖ್ಯ ರಸ್ತೆಯ ಮುಂಬದಿಯ ಮದ್ಯದ ಅಂಗಡಿಯೊAದರ ಬಳಿ ನಿದ್ದೆಗೆ ಜಾರಿದ ಜಾನುವಾರುಗಳು.

ಕುಶಾಲನಗರ ತಾಲೂಕಿನ ರಾಜ್ಯ ಹೆದ್ದಾರಿ ಗುಮ್ಮನಕೊಲ್ಲಿ ಗ್ರಾಮದ ಬಾರ್ ಒಂದರ ಮುಂದೆ ಬಿಯರ್ ಕುಡಿಯಲು ಬರುವ ಮಂದಿಯ ಮುಂದೆ, ನೀವು ನಿಮಗನ್ನಿಸಿದ್ದನ್ನು ಕುಡಿಯಿರಿ. ನಮಗೆ ಮಾತ್ರ ಶುದ್ಧ ಪರಿಶುದ್ಧವಾದ ನೀರನ್ನು ಕೊಡಿ ಎಂದು ರಾಸುಗಳು ಮಲಗಿದ್ದಲ್ಲೇ ಮೌನದಲ್ಲಿ ಕೋರುತ್ತಿರುವಂತೆ ಭಾಸವಾಗುತ್ತಿತ್ತು.

ಯುಗಾದಿ ಕಳೆದು ಅರ್ಧ ಮಾಸ ಕಳೆದರೂ ಕೂಡ ಇದುವರೆಗೂ ವರುಣ ದೇವ ಭುವಿಯ ಮೇಲೆ ಕರುಣೆ ತೋರದ ಕಾರಣ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಗೂ ಮೇಯುವ ಹಸಿರು ಹುಲ್ಲಿಗೆ ಕೊರತೆ ಎದುರಾಗಿದೆ.

ಬೀಡಾಡಿ ದನಗಳಾದರೂ ಜನವಸತಿಯ ಮನೆ ಮಂದಿಯ ಮುಂದೆ ಅಡ್ಡಾಡುತ್ತಾ ಪ್ರಾಣಿ ಪ್ರಿಯರು ನೀಡುವ ತಿನಿಸುಗಳನ್ನು ಮೆಲ್ಲುತ್ತಾ ಅಲ್ಲಲ್ಲಿ ಸಿಗುವ ನೀರನ್ನಾದರೂ ಕುಡಿದು ದಾಹ ಹಾಗೂ ಹಸಿವು ನೀಗಿಸಿಕೊಳ್ಳುತ್ತವೆ. ಆದರೆ ರಾಸುಗಳ ಗೋಳು ಮಾತ್ರ ಆ ರಾಸುಗಳ ಮಾಲೀಕನ ಹೊರತಾಗಿ ಬೇರೆ ಯಾರಿಗೂ ಕಾಣಿಸದು.

ಹಾಗಾಗಿ ಪಕ್ಷಿಗಳ ಜೊತೆ ತಮಗೆ ಎದುರಾಗುವ ಇಂತಹ ರಾಸುಗಳಿಗೂ ಹುಲ್ಲು ನೀರು ನೀಡುವ ಮೂಲಕ ಮಾನವೀಯತೆ ತೋರುವ ಅನಿವಾರ್ಯತೆ ಇದೆ.

-ಕೆ.ಎಸ್. ಮೂರ್ತಿ