ಗೋಣಿಕೊಪ್ಪಲು, ಏ. ೬: ದ.ಕೊಡಗಿನಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಕಾಡುತ್ತಿರುವುದರಿಂದ ರೈತರ ಕಾಫಿ ತೋಟಕ್ಕೆ ನೀರು ಹಾಯಿಸಲು ವಿದ್ಯುತ್‌ನ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದೆ ಇದೇ ರೀತಿ ಮುಂದುವರೆದಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಳ್ಳಿಚಂಡ ಧನು ತಿಳಿಸಿದರು.

ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಗೆ ಭೇಟಿ ನೀಡಿದ ರೈತ ಸಂಘದ ಪದಾಧಿಕಾರಿಗಳು ಕಚೇರಿಯಲ್ಲಿದ್ದ ಇಂಜಿನಿಯರ್ ಅನ್ನು ಸಮಜಾಯಿಷಿಕೆ ನೀಡುವಂತೆ ಕಳ್ಳಿಚಂಡ ಧನು ಒತ್ತಾಯಿಸಿದರು. ದ.ಕೊಡಗಿನ ರೈತರಿಗೆ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಚೆಸ್ಕಾಂ ವಿಫಲವಾಗಿದೆ. ಅನೇಕ ಬಾರಿ ಮನವಿ ಮಾಡಿದರೂ ಕಾಫಿ ತೋಟದ ಮಧ್ಯೆ ಹಾದುಹೋಗಿರುವ ೧೧ ಕೆವಿ ವಿದ್ಯುತ್ ಲೈನ್‌ಅನ್ನು ರಸ್ತೆ ಬದಿಗೆ ಬದಲಾಯಿಸುವ ಕೆಲಸ ಕೈಗೊಂಡಿಲ್ಲ.

ಹಲವು ಕಡೆಗಳಲ್ಲಿ ಟ್ರಾನ್ಸ್ಫಾರ್ಮರ್‌ಗಳನ್ನು ಬದಲಾಯಿಸಿ ಸಮರ್ಪಕ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಲೈನ್‌ಗೆ ಅಡಚಣೆಯಾಗಿರುವ ಮರದ ಕೊಂಬೆಗಳನ್ನು ಕೂಡಲೇ ತೆರವುಗೊಳಿಸಬೇಕು. ಲೋವೋಲ್ಟೇಜ್ ಆಗದಂತೆ ಎಚ್ಚರ ವಹಿಸಬೇಕು. ಆಗಿಂದ್ದಾಗಿಯೇ ಅಧಿಕಾರಿಗಳು ರೈತರ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಭೆಗಳನ್ನು ನಡೆಸಬೇಕು. ಶ್ರೀಮಂಗಲದಲ್ಲಿರುವ ೬೬ ಕೆ.ವಿ. ಸಬ್‌ಸ್ಟೇಷನ್ ಕೂಡಲೇ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರೈತರಿಗೆ ಗುಣಮಟ್ಟದ ವಿದ್ಯುತ್ತನ್ನು ನಿಗದಿತ ಸಮಯದಲ್ಲಿ ನೀಡಿದಲ್ಲಿ ರೈತರಿಗೆ ಸಹಾಯವಾಗುತ್ತದೆ. ಈ ಬಗ್ಗೆ ಇಲಾಖೆಯು ಕ್ರಮ ಕೈಗೊಳ್ಳಬೇಕು. ಅನಾವಶ್ಯಕ ವಿದ್ಯುತ್ ನಿಲುಗಡೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ರೈತರಿಗೆ ತೊಂದರೆ ಯಾಗದ ರೀತಿಯಲ್ಲಿ ಇಲಾಖೆ ಸಿಬ್ಬಂದಿಗಳು ಸ್ಪಂದಿಸಬೇಕು ಎಂದು ರೈತ ಸಂಘದ ಹಿರಿಯ ಮುಖಂಡರಾದ ಚಿಮ್ಮಂಗಡ ಗಣೇಶ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.