ಶನಿವಾರಸಂತೆ, ಏ. ೫: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಕೆರೆಯ ಒತ್ತುವರಿ ತೆರವುಗೊಳಿಸಿ, ಕಸ ಹಾಕದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡ ವರದಿ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆ ಶನಿವಾರಸಂತೆ ಹೋಬಳಿ ಕಂದಾಯ ಪರಿವೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ರಜಾಕ್, ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ ಹಾಗೂ ಗೌಡಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಕೆರೆ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗ್ರಾಮಸ್ಥರ ಸಮಕ್ಷಮದಲ್ಲಿ ಮಹಜರು ನಡೆಸಿದರು.

ಕಂದಾಯ ಪರಿವೀಕ್ಷಕ ಮಂಜುನಾಥ್ ಮಾತನಾಡಿ, ಕೆರೆಯ ಜಾಗವು ಪಹಣಿ ಅಥವಾ ಗ್ರಾಮ ನಕಾಶೆಯಲ್ಲಿ “ಕೆರೆ’’ ಎಂದು ನಮೂದಾಗಿರುವುದಿಲ್ಲ. ಈ ಜಾಗ ಪೈಸಾರಿಯಾಗಿದ್ದು, ಸರ್ವೆ ನಂ.೧/೫ ಕ್ಕೆ ಒಳಪಡುತ್ತದೆ ಎಂದು ಮಾಹಿತಿ ನೀಡಿದರು.

ಗ್ರಾಮಸ್ಥರು ಮಾತನಾಡಿ, ಕೆರೆ ಶತಮಾನಕ್ಕೂ ಹಿಂದಿನ ಪುರಾತನ ಕೆರೆಯಾಗಿದ್ದು, ಕೆರೆಯಾಗಿಯೇ ಬಳಕೆಯಾಗುತ್ತಿದೆ. ಆದರೆ, ದಾಖಲೆಗಳಲ್ಲಿ ಮಾತ್ರ ಕೆರೆ ಎಂದು ನಮೂದಾಗಿರುವುದಿಲ್ಲ. ಆದ್ದರಿಂದ ಕೆರೆಯ ವಿಸ್ತೀರ್ಣವನ್ನು ಅಳತೆ ಮಾಡಿ, ಪ್ರತ್ಯೇಕ ನಕಾಶೆಯನ್ನು ಗ್ರಾಮ ನಕಾಶೆಯಲ್ಲಿ ಅಳವಡಿಸಿ, ಪಹಣಿಯಲ್ಲಿ ಕೆರೆ ಎಂದೇ ನಮೂದಿಸಿಕೊಡುವಂತೆ ಕೋರಿದರು. ಅಲ್ಲದೇ ಮುಂದೆ ಒತ್ತುವರಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೆರೆಯ ಸುತ್ತಮುತ್ತ ೬೦-೭೦ ಮನೆಗಳಿದ್ದು ರಾತ್ರಿ ಸಮಯದಲ್ಲಿ ಕಸವನ್ನು ತಂದು ಕೆರೆಗೆ ಹಾಕುತ್ತಿದ್ದಾರೆ. ಕೆರೆ ನೀರು ಕಲುಷಿತಗೊಳ್ಳುತ್ತಿದ್ದು, ಕಸ ಹಾಕದಂತೆ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ ಮಾತನಾಡಿ, ಕೆರೆಗೆ ಕಸ ಹಾಕುತ್ತಿರುವ ಏರಿ ಜಾಗದ ಸುತ್ತಲು ಬೇಲಿ ಹಾಕಿಸಲಾಗುವುದು. ಸಾರ್ವಜನಿಕರು ಕಸ ಹಾಕದಂತೆ ಎಚ್ಚರಿಕೆ ನೀಡಲಾಗುವುದು. ಕೆರೆ ಮೇಲ್ಭಾಗದಲ್ಲಿ ತಾತ್ಕಾಲಿಕವಾಗಿ ಕಸ ಹಾಕಲು ರಿಂಗ್ ನಿರ್ಮಿಸಿ ಕೊಡಲಾಗುವುದು. ೨-೩ ದಿನಗಳಿಗೊಮ್ಮೆ ಕಸ ಸಂಗ್ರಹ ವಾಹನವನ್ನು ಆ ವ್ಯಾಪ್ತಿಗೆ ಕಳುಹಿಸಿಕೊಡಲಾಗುವುದು ಎಂದರು.

ಪAಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೆರೆ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆಯನ್ನು ಕಾನೂನು ರೀತಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ ಮೇರೆಗೆ ಗ್ರಾಮ ಪ್ರಮುಖರಾದ ಎಚ್.ಎಂ. ಹೂವಯ್ಯ, ಎಚ್.ಎಲ್. ರಘು, ರವಿ, ಗಣೇಶ್, ಜಯಂತ್, ಮಧು, ಎಚ್.ಸಿ. ದೇವರಾಜ್, ಎಚ್.ಕೆ. ರುದ್ರಪ್ಪ ಇತರರು ಮಹಜರಿಗೆ ಸಹಿ ಹಾಕಿದರು.