ಕಣಿವೆ, ಏ. ೫: ಬಾಲ್ಯಾವಸ್ಥೆಯಲ್ಲಿಯೇ ಪೋಲಿಯೋ ಎಂಬ ಮಾರಕ ರೋಗಕ್ಕೆ ತುತ್ತಾದ ಒಡಹುಟ್ಟಿದ ಸೋದರಿಯರು. ಈ ಸೋದರಿಯರ ಸೇವೆಗೆ ತಮ್ಮ ಬದುಕನ್ನೇ ಸವೆಸುತ್ತಿರುವ ವಾರಗಿತ್ತಿಯರು. ಅಂದರೆ ಈ ವಿಶೇಷಚೇತನ ಸೋದರಿಯರ ಒಡಹುಟ್ಟಿದ ಇಬ್ಬರು ತಮ್ಮಂದಿರಾದ ಕೆ.ಎನ್. ಗಣೇಶ ಕುಮಾರ್ ಹಾಗೂ ಕೆ.ಎನ್. ಪವನಕುಮಾರ್ ಎಂಬವರ ಪತ್ನಿಯರಾದ ಸುಕನ್ಯಾ ಗಣೇಶ್ ಹಾಗೂ ವೀಣಾ ಪವನ್ ಎಂಬವರ ನಿಸ್ವಾರ್ಥ ಹಾಗೂ ನಿಷ್ಕಲ್ಮಶ ಸೇವೆಗೆ ಮಹಿಳಾ ದಿನಾಚರಣೆಯ ಮಾಸದ ಅಂಗವಾಗಿ ಇತ್ತೀಚೆಗೆ ಮಹಿಳೆಯರೇ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, ಸಮಾಜದಲ್ಲಿ ಪ್ರತೀ ಕುಟುಂಬಗಳಲ್ಲೂ ನಿಮ್ಮಂತಹ ತಾಯಂದಿರ ಸಂತತಿ ಹೆಚ್ಚಲಿ. ಕೌಟುಂಬಿಕ ಬದುಕು ಸಾರ್ಥಕ ವಾಗಲಿ ಎಂದು ಶುಭ ಹಾರೈಸಿದರು. ಸುಮಾರು ೪೦ ವರ್ಷಗಳ ಹಿಂದೆ ಚಿಕ್ಕಂದಿನಲ್ಲೇ ಪೋಲಿಯೋ ಮಾರಕ ರೋಗಕ್ಕೆ ತುತ್ತಾದ ಕೆ.ಎನ್. ಮಂಜುಳಾ ಹಾಗೂ ಕೆ.ಎನ್. ಕಾವೇರಿ ಎಂಬ ಇಬ್ಬರು ಸೋದರಿ ಯರಿಗೆ ಸೊಂಟದಿAದ ಕೆಳಭಾಗದ ಎಲ್ಲಾ ಅಂಗಾAಗಗಳು ವೈಫಲ್ಯ ಗೊಂಡಿರುವುದರಿAದ ಇವರಿಬ್ಬರ ನಿತ್ಯಕಾರ್ಯ ಮಾಡಿಸಲು ಮನೆಯಲ್ಲಿ ಇಬ್ಬರು ಇರಲೇಬೇಕಾದ ಸ್ಥಿತಿ ಇದೆ.
ಆದರೆ, ಈ ವಿಶೇಷಚೇತನರ ಮನೆಗೆ ಸೊಸೆಯರಾಗಿ ಬಂದ ಸುಕನ್ಯಾ ಹಾಗೂ ವೀಣಾ ಈ ಮನೆಯ ಮಕ್ಕಳಾದ ಮಂಜುಳಾ ಹಾಗೂ ಕಾವೇರಿ ಇಬ್ಬರ ಸ್ಥಿತಿಗತಿ ಗಳನ್ನು ಕಂಡು ಒಂದು ದಿನವೂ ಅಣಕಿಸದೇ ಅಥವಾ ಅವಮಾನಿಸದೇ ಅವರಿಬ್ಬರನ್ನು ಅತ್ಯಂತ ಆತ್ಮೀಯ ವಾಗಿ ತಮಗೆ ಒಪ್ಪಿಸಿಕೊಂಡರು. ತಮ್ಮ ಎದೆಗಪ್ಪಿಕೊಂಡರು. ದಶಕಗಳಿಗೂ ಹೆಚ್ಚಿನ ಕಾಲದಿಂದಲೂ ಮಾಡುತ್ತಿ ರುವ ಸೇವೆಗೆ ಈ ವಾರಗಿತ್ತಿಯರು ಇಡೀ ಗ್ರಾಮದಲ್ಲಿ ಮಾದರಿ ಸೊಸೆಯಂದಿರಾಗಿದ್ದಾರೆ.
ಹಾಗಾಗಿ ಮಹಿಳಾ ದಿನಾಚರಣೆ ಅಂಗವಾಗಿ ಶಾಸಕರ ಉಪಸ್ಥಿತಿಯಲ್ಲಿ ಊರಿನ ವಿವಿಧ ಮಹಿಳಾ ಸಂಘಗಳ ಮಹಿಳೆಯರೆಲ್ಲಾ ಒಂದೆಡೆ ಸೇರಿ ಸನ್ಮಾನಿಸಿ ಸತ್ಕರಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ವಿಶೇಷಚೇತನೆ ಕೆ.ಎನ್. ಮಂಜುಳಾ, ನಾವು ಹುಟ್ಟಿದ ಕೆಲವೇ ವರ್ಷಗಳಲ್ಲಿ ಪೋಲಿಯೋಗೆ ತುತ್ತಾದೆವು. ಆದರೆ ಜೀವನವೇ ಮುಗಿಯಿತು ಎನ್ನುವಷ್ಟರಲ್ಲಿ ನನ್ನ ತಾಯಿ ಹಾಗೂ ಸೋದರರು ನಮಗೆ ಸಂಪೂರ್ಣ ಸಹಕಾರ ನೀಡಿ ಪುನರ್ಜನ್ಮ ಕಲ್ಪಿಸಿದರು. ಬಳಿಕ ಮನೆಗೆ ಸೊಸೆಯಂದಿರಾಗಿ ಬಂದ ಸುಕನ್ಯಾ ಹಾಗೂ ವೀಣಾ ನಮ್ಮಿಬ್ಬರ ಪಾಲಿಗೆ ಕಾಮಧೇನುವಾದರು.
ಇಂತಹ ಸೊಸೆಯಂದಿರ ಸಂತಾನ ಹೆಚ್ಚಾದಷ್ಟು ಯಾವುದೇ ಕುಟುಂಬಗಳಲ್ಲಿ ಕಲಹ, ಭಿನ್ನಾಭಿ ಪ್ರಾಯ ಇರಲ್ಲ. ಮನೆಯೊಂದು ಮೂರು ಬಾಗಿಲುಗಳಾಗಲ್ಲ ಎನ್ನುತ್ತಲೇ ತಮ್ಮಂದಿರ ಪತ್ನಿಯರ ಸೇವೆಯನ್ನು ಸ್ಮರಿಸುತ್ತಾ ಭಾವುಕರಾದರು. ಈ ಸಂದರ್ಭ ರಾಜ್ಯ ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಇದ್ದರು.
- ಕೆ.ಎಸ್. ಮೂರ್ತಿ