ಮುಳ್ಳೂರು, ಏ. ೪: ಜಾನಪದ ಹಿನ್ನೆಲೆಯುಳ್ಳ ಮಾದ್ರೆ ಗ್ರಾಮದಲ್ಲಿ ನೆಲಸಿರುವ ಸುಗ್ಗಿಯಮ್ಮ, ಕೆಂಚಮ್ಮ, ದೇವಿರಮ್ಮನವರ ಸುಗ್ಗಿ ಹಬ್ಬ ಸಂಪನ್ನಗೊAಡಿತು. ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಮಾದ್ರೆ ಗ್ರಾಮದ ಸುಗ್ಗಿ ಉತ್ಸವವು ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುಗ್ಗಿಯಮ್ಮ, ಕೆಂಚಮ್ಮ ಮತ್ತು ದೇವಿರಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷವೂ ಗ್ರಾಮದ ಸುಗ್ಗಿಕಟ್ಟೆಯಲ್ಲಿ ೨ ದಿನ ಸುಗ್ಗಿ ಹಬ್ಬ ಆಚರಣೆಗೊಳ್ಳುತ್ತದೆ. ಸೋಮವಾರ ಉತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಅಡೆ ಕಟ್ಟುವ ಕಾರ್ಯ, ಅಡೆ ದೇವರಿಗೆ ಗಂಗಾಸ್ನಾನ ಪೂಜೆ, ಅಡ್ಡಪಲ್ಲಕ್ಕಿ ಮರೆವಣಿಗೆ ಮೂಲಕ ಗ್ರಾಮದ ಸುಗ್ಗಿಕಟ್ಟೆಗೆ ಪ್ರವೇಶದೊಂದಿಗೆ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಮಂಗಳವಾರ ಮುಂಜಾನೆ ೪ ಗಂಟೆಯಿAದ ಸುಗ್ಗಿಕಟ್ಟೆಯಲ್ಲಿ ಕುದುರೆ ಕುಣಿತ, ಕೀಲು ಕುದುರೆ, ಬಿಲ್ಲು ಕುಣಿತ, ಮಾಲು ಕುಣಿತ ಇನ್ನು ಮುಂತಾದ ಜಾನಪದ ಸೊಗಡಿನ ಪ್ರದರ್ಶನದೊಂದಿಗೆ ಸುಗ್ಗಿ ಆಚರಿಸಲಾಯಿತು. ಸುಗ್ಗಿ ಉತ್ಸವ ಅಡೆ ದೇವರುಗಳಿಗೆ ಮಹಾ ಮಂಗಳಾರತಿ ಪೂಜೆ ಬಳಿಕ ಕೆಂಡೋತ್ಸವವನ್ನು ನೆರವೇರಿಸಲಾಯಿತು. ಸುಗ್ಗಿಕಟ್ಟೆಯಿಂದ ಅಡೆ ದೇವರುಗಳನ್ನು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತಂದು ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಮೂಲಕ ಸುಗ್ಗಿ ಉತ್ಸವ ಸಂಪನ್ನಗೊAಡಿತು. ಸುಗ್ಗಿ ಉತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.