ಕೂಡಿಗೆ, ಏ. ೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸೆ ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಚಿಕ್ಕಮ್ಮ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಪೌರಾಣಿಕ ಕಥೆಗಳಾದ ಶ್ರೀ ಶನಿ ಪ್ರಭಾವ (ರಾಜ ವಿಕ್ರಮ) ಎಂಬ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಪೌರಾಣಿಕ ಕಥೆಗಳುಳ್ಳ ನಾಟಕಗಳ ಪ್ರದರ್ಶನ ನೀಡುವುದರಿಂದ ಕಲೆಯ ಉಳಿಯುವಿಕೆಗೆ ಸಹಕಾರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ್ ಕುಮಾರ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ ಯುವ ಜನಾಂಗಕ್ಕೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ಇಂತಹ ಪೌರಾಣಿಕ ಐತಿಹಾಸಿಕ ಕಥೆಗಳು ಪೂರಕವಾಗುತ್ತವೆ ಎಂದರು. ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವನಂಜಪ್ಪ, ನಾಟಕ ಮಂಡಳಿ ಅಧ್ಯಕ್ಷ ರಂಗರಾಜ್, ಗ್ರಾಮದ ಪ್ರಮುಖರಾದ ಸಣ್ಣಸ್ವಾಮಿ, ಶಿವಣ್ಣ, ಕೃಷ್ಣ, ಸೇರಿದಂತೆ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.