ಮರುನಾಮಕರಣ : ಚೀನಾ ನಡೆ ತಿರಸ್ಕರಿಸಿದ ಭಾರತ
ನವದೆಹಲಿ, ಏ. ೪: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಚೀನಾ ಮರುನಾಮಕರಣವನ್ನು ಭಾರತ ಸರ್ಕಾರ ಮಂಗಳವಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಪ್ರತಿಪಾದಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ಹಾಲಿ ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿರುವುದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ ಎಂದು ಬಾಗ್ಚಿ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ಮರುನಾಮಕರಣ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಅವರು ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ ೧೧ ಸ್ಥಳಗಳ ಪ್ರಮಾಣಿತ ಹೆಸರುಗಳನ್ನು ಭಾನುವಾರ ಬಿಡುಗಡೆ ಮಾಡಿತ್ತು. ಇದನ್ನು "ಜಂಗ್ನಾನ್, ಟಿಬೆಟ್ನ ದಕ್ಷಿಣ ಭಾಗ" ಎಂದು ಚೀನಾ ಕರೆದಿದೆ.
ಆರ್ಥಿಕ ಬೆಳವಣಿಗೆ : ಶೇ. ೬.೩ಕ್ಕೆ ಕಡಿತಗೊಳಿಸಿದ ವಿಶ್ವಬ್ಯಾಂಕ್
ನವದೆಹಲಿ, ಏ. ೪: ೨೦೨೪ರ ವಿತ್ತೀಯ ವರ್ಷದ ಭಾರತದ ಆರ್ಥಿಕ ಬೆಳವಣಿಗೆಯನ್ನು ವಿಶ್ವ ಬ್ಯಾಂಕ್ ಶೇ. ೬.೬ ರಿಂದ ಶೇ. ೬.೩ಕ್ಕೆ ಕಡಿತಗೊಳಿಸಿದೆ. ಭಾರತದ ಆರ್ಥಿಕ ಬೆಳವಣಿಗೆಯ ಕುರಿತ ಮುನ್ಸೂಚನೆ ವರದಿ ಬಿಡುಗಡೆ ಮಾಡಿದ ವಿಶ್ವಬ್ಯಾಂಕ್, ಆರ್ಥಿಕ ಬೆಳವಣಿಗೆಯನ್ನು ಶೇ. ೬.೩ಕ್ಕೆ ಕಡಿತಗೊಳಿಸಿದೆ. ಈ ಹಿಂದೆ ಈ ಅಂದಾಜನ್ನು ವಿಶ್ವಬ್ಯಾಂಕ್ ಶೇ. ೬.೬ರಷ್ಟು ಅಂದಾಜಿಸಿತ್ತು. ಇದೀಗ ನೂತನ ಪರಿಷ್ಕರಣೆಯಲ್ಲಿ ಶೇ. ೦.೩ ರಷ್ಟು ಕಡಿತಗೊಳಿಸಿದೆ. ವಿತ್ತೀಯ ವರ್ಷ ೨೦೨೪ ರಲ್ಲಿ ಬಳಕೆಯಲ್ಲಿನ ಮಿತವ್ಯಯದಿಂದಾಗಿ ಭಾರತದ ಜಿ.ಡಿ.ಪಿ. ಈ ಹಿಂದಿನ ಶೇ. ೬.೬ರ ಅಂದಾಜಿಗೆ ಹೋಲಿಸಿದರೆ ೬.೩ ಶೇಕಡಾಕ್ಕೆ ಮಧ್ಯಮ ವಾಗಬಹುದೆಂದು ನಿರೀಕ್ಷಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ವರದಿಯಲ್ಲಿ ತಿಳಿಸಿದೆ. ನಿಧಾನಗತಿಯ ಬಳಕೆಯ ಬೆಳವಣಿಗೆ ಮತ್ತು ಸವಾಲಿನ ಬಾಹ್ಯ ಪರಿಸ್ಥಿತಿಗಳಿಂದ ಬೆಳವಣಿಗೆಯನ್ನು ನಿರ್ಬಂಧಿಸುವ ಸಾಧ್ಯತೆಯಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇಂಡಿಯಾ ಡೆವಲಪ್ಮೆಂಟ್ ಅಪ್ಡೇಟ್ನಲ್ಲಿ ಹೇಳಿದೆ. ಏರುತ್ತಿರುವ ಎರವಲು ವೆಚ್ಚಗಳು ಮತ್ತು ನಿಧಾನವಾದ ಆದಾಯದ ಬೆಳವಣಿಗೆಯು ಖಾಸಗಿ ಬಳಕೆಯ ಬೆಳವಣಿಗೆಯ ಮೇಲೆ ತೂಗುತ್ತದೆ ಮತ್ತು ಸಾಂಕ್ರಾಮಿಕ-ಸAಬAಧಿತ ಹಣಕಾಸಿನ ಬೆಂಬಲ ಕ್ರಮಗಳನ್ನು ಹಿಂತೆಗೆದುಕೊಳ್ಳುವುದರಿAದ ಸರ್ಕಾರದ ಬಳಕೆ ನಿಧಾನಗತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ತೆರಿಗೆ ಸಂಗ್ರಹದಲ್ಲಿ ಶೇ. ೧೭.೬೩ ರಷ್ಟು ಏರಿಕೆ
ನವದೆಹಲಿ, ಏ. ೪: ೨೦೨೨-೨೩ನೇ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. ೧೭. ೬೩ ರಷ್ಟು ಏರಿಕೆಯಾಗಿದ್ದು, ಸರ್ಕಾರದ ಒಟ್ಟಾರೇ ತೆರಿಗೆ ಸಂಗ್ರಹ ರೂ. ೧೬.೬೧ ಲಕ್ಷ ಕೋಟಿಗೆ ತಲುಪಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜು ರೂ. ೧೧,೦೦೦ ಕೋಟಿಗಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ನೇರ ತೆರಿಗೆ ಸಂಗ್ರಹವನ್ನು೧೪.೨ ಲಕ್ಷ ಕೋಟಿಯಿಂದ ೧೬.೫ ಲಕ್ಷ ಕೋಟಿಗೆ ಪರಿಷ್ಕರಿಸಿದೆ. ೨೦೨೨ರ ಆರ್ಥಿಕ ವರ್ಷದಲ್ಲಿ ಶೇ. ೨೦.೩೩ ರಷ್ಟು ಬೆಳವಣಿಗೆಯೊಂದಿಗೆ ಒಟ್ಟು ತೆರಿಗೆ ಸಂಗ್ರಹ ಶೇ. ೧೬.೩೬ ಕೋಟಿಯಷ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ತೆರಿಗೆ ಸಂಗ್ರಹ ರೂ. ೧೯. ೬೮ ಲಕ್ಷ ಕೋಟಿಯಾಗಿದೆ. ಈ ಆರ್ಥಿಕ ವರ್ಷದಲ್ಲಿ ೩.೦೭ ಲಕ್ಷ ಕೋಟಿ ರೂಪಾಯಿ ಮರುಪಾವತಿ ನೀಡಲಾಗಿದೆ. ಇದು ಕಳೆದ ವರ್ಷ ನೀಡಲಾಗಿದ್ದ ಮರುಪಾವತಿಗಿಂತ (ರೂ. ೨.೨೩ ಲಕ್ಷ ಕೋಟಿ) ಶೇ. ೩೭.೪೨ ರಷ್ಟು ಹೆಚ್ಚಾಗಿದೆ.
ದೆಹಲಿ ಪೊಲೀಸರ ಕಾರ್ಯಾಚರಣೆ - ಮೆಕ್ಸಿಕೋದಲ್ಲಿ ಗ್ಯಾಂಗ್ಸ್ಟರ್ ಬಂಧನ
ನವದೆಹಲಿ, ಏ. ೪: ದೆಹಲಿಯ ‘ಮೋಸ್ಟ್ ವಾಂಟೆAಡ್' ಗ್ಯಾಂಗ್ಸ್ಟರ್ ದೀಪಕ್ ಬಾಕ್ಸರ್ನನ್ನು ಮೆಕ್ಸಿಕೋದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಾಲಿವುಟ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ ದೀಪಕ್ ಬಾಕ್ಸರ್ನನ್ನು ಮೆಕ್ಸಿಕೋ ಅಧಿಕಾರಿಗಳ ನೆರವಿನೊಂದಿಗೆ ದೆಹಲಿ ಪೊಲೀಸರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ಗಳಲ್ಲಿ ಒಬ್ಬನಾದ ದೀಪಕ್ ಬಾಕ್ಸರ್ನನ್ನು ಮೆಕ್ಸಿಕೊದಲ್ಲಿ ಬಂಧಿಸಲಾಗಿದ್ದು, ಈ ವಾರದ ಕೊನೆಯಲ್ಲಿ ಭಾರತಕ್ಕೆ ಕರೆತರಲಾಗುವುದು ಎಂದು ಕಾರ್ಯಾಚರಣೆಯ ಭಾಗವಾಗಿದ್ದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಹಾಯದಿಂದ ದಿಲ್ಲಿಯ ವಿಶೇಷ ತಂಡವು ದೀಕಪ್ ಬಾಕ್ಸರ್ನನ್ನು ಮೆಕ್ಸಿಕೊದಲ್ಲಿ ಸೆರೆ ಹಿಡಿದಿದೆ ಎಂದು ಅವರು ಹೇಳಿದ್ದಾರೆ.
ಪುನೀತ್ ಕೆರೆಹಳ್ಳಿ ಬಂಧನಕ್ಕೆ ತಂಡ ರಚನೆ
ಬೆಂಗಳೂರು, ಏ. ೪: ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಾಟ ವಾಹನದ ಸಹಾಯಕ ಚಾಲಕ ಇದ್ರೀಸ್ ಪಾಷಾ (೩೯) ಎಂಬಾತನನ್ನು ಹತ್ಯೆಗೈದ ಆರೋಪ ಹೊತ್ತಿರುವ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧಿಸಲು ರಾಮನಗರ ಜಿಲ್ಲಾ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಬಿ.ಆರ್. ರವಿಕಾಂತೇಗೌಡ, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಫೋರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ತಂಡ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆ ಮತ್ತು (ಪಾಶಾ) ಸಾವಿಗೆ ನಿಖರವಾದ ಕಾರಣ ತಿಳಿಯಲು ವರದಿಗಾಗಿ ಕಾಯುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದರು. ಸಾತನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದ್ದರೆ, ಉಪವಿಭಾಗದ ಡಿವೈಎಸ್ಪಿ ಮತ್ತೊಂದು ತಂಡದ ನೇತೃತ್ವ ವಹಿಸಿದ್ದಾರೆ. ಉಪ ವಿಭಾಗದ ಪೊಲೀಸರು ನೇತೃತ್ವದಲ್ಲಿ ಮತ್ತೇರಡು ತಂಡ ರಚಿಸಲಾಗಿದೆ. ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಪಾಷಾ ಶವ ಪತ್ತೆಯಾದ ನಂತರ ಕೆರೆಹಳ್ಳಿ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ನ್ಯಾಯದಾನದಲ್ಲಿ ಕರ್ನಾಟಕ ಅಗ್ರಸ್ಥಾನ
ನವದೆಹಲಿ, ಏ. ೪: ನ್ಯಾಯದಾನದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದ್ದು ೨೦೨೨ ರ ಭಾರತೀಯ ನ್ಯಾಯಾಂಗ ವರದಿ (ಐಜೆಆರ್)ನ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ೧೮ ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ ೩ನೇ ಸ್ಥಾನದಲ್ಲಿದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳೇ ಮುಂತಾದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ ೧೮ನೇ ಸ್ಥಾನದಲ್ಲಿದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳನ್ನು ಪರಿಗಣಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ. ಅಚ್ಚರಿಯೆಂದರೆ, ಗುಜರಾತ್ ೪ನೇ ಸ್ಥಾನದಲ್ಲಿದ್ದು ಆಂಧ್ರಪ್ರದೇಶ ೫ನೇ ಸ್ಥಾನದಲ್ಲಿದೆ.
ಹಿಮಪಾತ : ಆರು ಪ್ರವಾಸಿಗರು ಸಾವು
ಗ್ಯಾಂಗ್ಟಕ್, ಏ. ೪: ಸಿಕ್ಕಿಂನ ನಾಥುಲಾ ಪ್ರದೇಶದಲ್ಲಿ ಮಂಗಳವಾರ ಭಾರಿ ಹಿಮಪಾತ ಸಂಭವಿಸಿದ್ದು, ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ೧೧ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜ್ಯ ರಾಜಧಾನಿ ಗ್ಯಾಂಗ್ಟಾಕ್ನ ಆಸ್ಪತ್ರೆಗೆ ಕರೆತರಲಾಗಿದೆ ಮತ್ತು ೨೨ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಹಿಮದಡಿ ಸಿಲುಕಿರುವವರ ರಕ್ಷಣೆ ಮತ್ತು ರಸ್ತೆ ತೆರವು ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಭವಿಸಿದ ಹಿಮಕುಸಿತದಲ್ಲಿ ೨೫-೩೦ ಪ್ರವಾಸಿಗರು ಸಿಲುಕಿಕೊಂಡಿದ್ದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ.