ಸುಂಟಿಕೊಪ್ಪ, ಏ. ೪: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನÀ್ನಗೊAಡಿತು.
ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ ೭ ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವ್ರತದಲ್ಲಿದ್ದು, ನಂತರ ಪುರುಷರು ದೇವಾಲಯದ ಆವರಣದಲ್ಲಿ ರಾತ್ರಿಯ ವೇಳೆ ತಂಗುವ ಮೂಲಕ ದೇವಾಲಯದಲ್ಲಿ ಚೌರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಅರ್ಪಿಸಿದರು. ಕೊನೆಯ ದಿನದಂದು ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ ಈಡು ಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ನಂತರ ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.
ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ್ ಶರ್ಮ ನೆರವೇರಿಸಿದರು. ಈ ಬಾರಿ ದೇವಾಲಯದ ಆವರಣದಲ್ಲಿ ವಸಂತ ಕಟ್ಟೆಯನ್ನು ನಿರ್ಮಿಸಲಾಗಿದ್ದು, ಶ್ರೀದೇವರ ಉತ್ಸವ ಮೂರ್ತಿಯ ಪೂಜೆ ಮತ್ತು ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ದರ್ಶನ ಬಲಿ ವಿಶೇಷವಾಗಿ ಗಮನ ಸೆಳೆಯಿತು.
ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.