ಶನಿವಾರಸಂತೆ, ಏ. ೩: ಸಮೀಪದ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಾರಳ್ಳಿ ಗ್ರಾಮದ ಹಾರಳ್ಳಿ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಲ್ಲದೇ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಿ ತ್ಯಾಜ್ಯ ಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಗ್ರಾಮಸ್ಥರು ತಹಶೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಶನಿವಾರಸಂತೆ ಕಂದಾಯ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದಾರೆ.

ಹಾರಳ್ಳಿ ಕೆರೆ ಶತಮಾನಕ್ಕೂ ಹಿಂದಿನ ಪುರಾತನ ಸಾರ್ವಜನಿಕ ಕೆರೆಯಾಗಿದ್ದು ಇದರ ದುರಸ್ತಿಗೆ ಸರ್ಕಾರದಿಂದ ರೂ.೫೦ ಲಕ್ಷದಿಂದ ರೂ.೧ ಕೋಟಿಯವರೆಗೆ ಅನುದಾನ ಮಂಜೂರಾಗಿದೆ. ಆದರೆ, ಕೆರೆಯ ಜಾಗ ಪ್ಲಾನ್‌ನಲ್ಲಿ ಇರುವುದಿಲ್ಲವಾದ ಕಾರಣ, ನಕಾಶೆಯಲ್ಲಿ ಜಾಗವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೆರೆ ದನಕರುಗಳಿಗೆ ಕುಡಿಯಲು ನೀರೊದಗಿಸುತ್ತಿತ್ತು. ರೈತರ ವ್ಯವಸಾಯಕ್ಕೂ ಉಪಯೋಗ ವಾಗುತ್ತಿತ್ತು. ಅಜ್ಜಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಇದ್ದರೂ, ವಾಹನ ಸೌಲಭ್ಯವಿದ್ದರೂ ಪಕ್ಕದ ಬೀಟಿಕಟ್ಟೆ ಕಾಲೋನಿಯ ಜನರು ಕಸ ತಂದು ಇಲ್ಲಿ ಎಸೆಯುತ್ತಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸಿ ನಕಾಶೆಗೆ ಸೇರಿಸಬೇಕು. ಕಸ ತಂದು ಕೆರೆ ಏರಿಗೆ ಎಸೆಯದಂತೆ ಎಚ್ಚರಿಸಬೇಕು’ ಎಂದು ಎಚ್.ಎಲ್. ರಘು, ಎಚ್.ಎಂ. ಹೂವಯ್ಯ, ಗಿರೀಶ್, ರವಿ, ಮಧು, ಹೇಮಚಂದ್ರ, ರುದ್ರಪ್ಪ, ಜಯಂತ್, ಬಾಲಕೃಷ್ಣ, ಧರ್ಮಣ್ಣ, ನಿರ್ವಾಣಪ್ಪ, ಎಚ್.ಸಿ. ದೇವರಾಜ್, ನಾಗರಾಜ್, ಬಿ.ಎನ್. ದೇವರಾಜ್ ಹಾಗೂ ಇತರ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ ಮಾತನಾಡಿ, ಕೆರೆಯನ್ನು ಗ್ರಾಮದ ಹಿರಿಯರು “ನವದುರ್ಗ ಪರಮೇಶ್ವರಿ ಜಳಕದ ಕೆರೆ’’ ಎಂದು ಕರೆಯುತ್ತಾರೆ. ಆದರೆ, ಸಂಬAಧಿಸಿದ ಹಿಂದಿನ ದಾಖಲೆ ದೊರೆಯುತ್ತಿಲ್ಲ. ಕೆರೆ ಜಾಗವನ್ನು ನಕಾಶೆಯಲ್ಲಿ ಗುರುತಿಸಿ, ಸರ್ವೆ ನಂಬರನ್ನು ಕೊಟ್ಟು ಆರ್‌ಟಿಸಿ ಮಾಡಿಸಿಕೊಡುವ ಜವಾಬ್ದಾರಿ ಕಂದಾಯ ಇಲಾಖೆಯದು. ಪಂಚಾಯಿತಿಯಿAದಲೂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಪಂಚಾಯಿತಿ ವತಿಯಿಂದ ಆಗಾಗ್ಗೆ ಕೆರೆಯ ಹೂಳು ತೆಗೆಸಿ, ದುರಸ್ತಿ ಮಾಡಿಸಲಾಗಿದೆ. ಒತ್ತುವರಿ ಮುಂದುವರೆಯದAತೆಯೂ ಕ್ರಮ ಕೈಗೊಂಡಿರುತ್ತೇವೆ. ಪಂಚಾಯಿತಿ ಒಣ ಕಸವನ್ನು ಸಂಗ್ರಹಿಸುತ್ತಿದೆ. ಆದರೆ, ಕಾಲೋನಿಯವರು ಹಸಿ ಕಸವನ್ನು ತಂದು ಎಸೆಯುತ್ತಿದ್ದಾರೆ. ಮನೆಯಲ್ಲೇ ಗೊಬ್ಬರ ಮಾಡಿ ಗುಂಡಿ ತೆಗೆದು ಮುಚ್ಚಿಸುವಂತೆ ತಿಳಿಸಿದರು. ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಒತ್ತುವರಿಯಾಗ ದಂತೆ ಕೆರೆಯನ್ನು ವಿಸ್ತರಿಸಿಕೊಟ್ಟಿದ್ದೇವೆ. ದಾಖಲೆ ದೊರೆತು ಆರ್‌ಟಿಸಿ ಮಾಡಿಸಿದರೆ ಮಾತ್ರ ಹೆಚ್ಚಿನ ಒತ್ತುವರಿ ತಡೆಗಟ್ಟಬಹುದು ಎಂದು ಪ್ರತಿಕ್ರಿಯಿಸಿದರು.