ಸೋಮವಾರಪೇಟೆ, ಏ. ೩: ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖಾಧಿಕಾರಿಗಳ ತಂಡ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿ ಸಹಿತ, ಪರಿಕರಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ಚನ್ನಾಪುರ ಗ್ರಾಮದ ಚಂದ್ರಶೇಖರ ಎಂಬವರ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕಳ್ಳಭಟ್ಟಿ ಸಾರಾಯಿ ತಯಾರಿಸಲು ಸಿದ್ದತೆ ಮಾಡಿಕೊಂಡಿದ್ದ ೩೦೦ ಲೀಟರ್ ಬೆಲ್ಲದ ಪುಳಗಂಜಿ, ೧೦ ಲೀಟರ್ ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಚಂದ್ರಶೇಖರ್ ವಿರುದ್ಧ ಅಬಕಾರಿ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಅಧೀಕ್ಷಕರಾದ ಆರ್.ಎಂ. ಚೈತ್ರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಪೇದೆಗಳಾದ ಎ.ಪಿ. ವೀರೇಶ್‌ಕುಮಾರ್, ಮಹಾದೇವ ಗಡ್ಡಿ, ಕಾಂತರಾಜ್ ಅವರುಗಳು ಭಾಗವಹಿಸಿದ್ದರು.