ಮಡಿಕೇರಿ, ಏ. ೪: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋಟ್ಸ್ ಅಂಡ್ ಗೇಮ್ಸ್ ವತಿಯಿಂದ ೧೨ನೇ ವರ್ಷದ ಹಾಕಿ ಬೇಸಿಗೆ ಶಿಬಿರವನ್ನು ಏಕಲವ್ಯ ಪ್ರಶಸ್ತಿ ವಿಜೇತ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನ್ ಸೋಮಣ್ಣ ಕ್ರೀಡಾಪಟುಗಳಲ್ಲಿ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇರಬೇಕು. ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯನ್ನು ಕೇವಲ ಮನೋರಂಜನೆಗಾಗಿ ಮಾತ್ರವೆಂದು ಪರಿಗಣಿಸಿದೆ ಪೂರ್ಣಕಾಲಿಕ ಉದ್ಯೋಗವಾಗಿ ಮಾರ್ಪಾಡು ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬಹುದೆಂದು ಕಿವಿ ಮಾತು ಹೇಳಿದರು. ಕ್ರೀಡೆಯಲ್ಲಿ ಯಶಸ್ಸು ಕಾಣಲು ಪೋಷಕರ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯ ಕ್ರಮದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿ ನಿರ್ದೇಶಕ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಸಂಸ್ಥೆಯ ನಿರ್ದೇಶಕ ಮೂಡೇರ ಕಾಳಯ್ಯ, ಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ತರಬೇತುದಾರ, ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು.