ಸೋಮವಾರಪೇಟೆ, ಏ. ೨: ತಾಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಕರೆಯಲ್ಪಡುವ ನಗರಳ್ಳಿ ಸುಗ್ಗಿ ಉತ್ಸವವು ತಾ. ೧೦ ರಂದು ನಗರಳ್ಳಿಯ ಸುಗ್ಗಿ ಬನದಲ್ಲಿ ನಡೆಯಲಿದ್ದು, ಸುಗ್ಗಿ ಆಚರಣೆಯ ಆರಂಭವಾಗಿ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು.

ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ದೇವಿಯ ತವರೂರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಿತು.

ಅನಾದಿಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಕೂತಿ ಗ್ರಾಮದ ಚಾವಡಿಕಟ್ಟೆಯಲ್ಲಿ ಗ್ರಾಮದ ಮನೆಯಲ್ಲಿರುವ ಬಂದೂಕುಗಳನ್ನು ತಂದಿಟ್ಟು ಸಾಮೂಹಿಕವಾಗಿ ಪೂಜೆ ಮಾಡಲಾಯಿತು. ನಂತರ ದೇವರಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಹಾಕಿದರು. ತದನಂತರ ಬಂದೂಕಿನಿAದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಕೂತಿ ಗ್ರಾಮದ ಅಧ್ಯಕ್ಷ ಹೆಚ್.ಡಿ. ಮೋಹನ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ಕಿಶನ್, ಗ್ರಾಮದ ಪಟೇಲ ಬಸವರಾಜ್, ಪ್ರಮುಖರಾದ ಕೆ.ಟಿ. ಪರಮೇಶ್, ಗಣೇಶ್, ದಿನೇಶ್, ಗಿರೀಶ್, ಅರ್ಚಕ ಅನಂತರಾಮ್ ಸೇರಿದಂತೆ ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.