ಮಡಿಕೇರಿ, ಏ. ೧: ನಿವೇಶನ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಾಲೇಮಾಡು ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ.
ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡು ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಹೋರಾಟ ನಡೆಸುತ್ತಿರುವವರ ಬೇಡಿಕೆಗಳನ್ನು ಈಡೇರಿಸದಿದ್ದರೆ ೨೦೨೩ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಸರಕಾರಿ ಜಾಗವನ್ನು ಉಳ್ಳವರಿಗೆ ೩೦ ವರ್ಷ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ಮುಂದಾಗಿದೆ. ಆದರೆ, ಸೂರಿಗಾಗಿ ೯೪, ೯೪ಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೇ ೫೩, ೫೭, ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೂ ಅಕ್ರಮ ಸಕ್ರಮದಡಿ, ಅರ್ಜಿ ತಿರಸ್ಕೃತವಾಗುತ್ತಿರು ವುದು ಕಂಡುಬAದಿರುತ್ತದೆ. ಇದು ಸರಕಾರದ ಮಲತಾಯಿ ಧೋರಣೆ ಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಖುದ್ದಾಗಿ ಪಾಲೇಮಾಡು ಕಾನ್ಸಿರಾಂ ನಗರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಬೇಕು. ಪಾಲೇಮಾಡು ಕಾನ್ಸಿರಾಂ ನಗರದಲ್ಲಿ ವಾಸವಿರುವ ಬಡವರಿಗೆ ವಿತರಿಸಿದ ಹಕ್ಕು ಪತ್ರದಲ್ಲಿ ೦.೧/೨ ಸೆಂಟು ಹಾಗೂ ೦.೧ಸೆಂಟು ಜಾಗ ಕೊಡಲಾಗಿದ್ದು, ಹಕ್ಕು ಪತ್ರವನ್ನು ತಿದ್ದುಪಡಿಸಿ ವಿಶೇಷ ಯೋಜನೆ ಎಂದು ಪರಿಗಣಿಸಿ ಕನಿಷ್ಟ ೩, ೩/೪ ಕ್ಕೆ ನಿಗದಿಪಡಿಸಬೇಕು. ಪಾಲೇಮಾಡು ಕಾನ್ಸಿರಾಂ ನಗರದ ಬಡವರು ನಮೂನೆ ೫೭ರಲ್ಲಿ ಸಲ್ಲಿಸಿದ ಅರ್ಜಿಯನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ಬಡವರು ಬಳಸಿಕೊಂಡು ಸ್ವಾಧೀನಪಡಿಸಿಕೊಂಡ ಕನಿಷ್ಟ ೦.೦೫ ರಿಂದ ೦.೦೧ ಜಾಗಕ್ಕೆ ಅಕ್ರಮ ಸಕ್ರಮದಡಿ ಈ ಕೂಡಲೇ ಮಂಜೂರಾತಿ ನೀಡಿ ಆರ್ಟಿಸಿಯಲ್ಲಿ ನಮೂದಿಸಬೇಕು. ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬ ಗಳು ಶೇ ೬೫ ರಷ್ಟಿದ್ದು, ಸಮಾಜ ಕಲ್ಯಾಣ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭವನ, ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ವಿನಿಯೋಗಿಸಬೇಕು. ಇಲ್ಲದಿದ್ದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪಾಲೇಮಾಡು ನಿವಾಸಿಗಳು ಮಾರ್ಚ್ ೧೭ ರಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನ ಲಭಿಸಿಲ್ಲ ಎಂದು ಆರೋಪಿಸಿರುವ ಹೋರಾಟಗಾರರು ಕಳೆದ ಐದು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂದರ್ಭ ಪಾಲೇಮಾಡು ಹೋರಾಟ ಸಮಿತಿ ಅಧ್ಯಕ್ಷ ಕೆ. ಮೋಣಪ್ಪ, ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಪ್ರಮುಖರಾದ ಆನಂದ್, ವಿಜಯ, ಸುರೇಶ್, ವೀಣಾ ಸೇರಿದಂತೆ ಇನ್ನಿತರರು ಹಾಜರಿದ್ದರು.