ವೀರಾಜಪೇಟೆ, ಏ. ೧: ಕೊಡವ ಜನಾಂಗದ ಹೆಸರಿನಲ್ಲಿ ಕೆಲವರು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗಕ್ಕೆ ಮುಜುಗರ ಉಂಟುಮಾಡುವವರಿಗೆ ಹಾಗೂ ಅವರುಗಳು ನೀಡುವ ಹೇಳಿಕೆಯನ್ನು ವೈಯಕ್ತಿಕ ಎಂದು ಭಾವಿಸಿದೆ, ಜನಾಂಗದ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಘನತೆಗೆ ಕುತ್ತು ತರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆಯ ಅಖಿಲ ಕೊಡವ ಸಮಾಜ ಕೇಂದ್ರ ಕಚೇರಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೊಡವ ಜನಾಂಗದ ಕೆಲವರು ತಮ್ಮ ಸಂಘಟನೆಗಳು, ತಾವು ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳ ಮೂಲಕ ಹೇಳಿಕೆ ನೀಡುವಾಗ ಜನಾಂಗಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಇತರ ಜನಾಂಗ ಕೊಡವ ಜನಾಂಗವನ್ನು ಗೇಲಿ ಮಾಡುವ ಹಂತಕ್ಕೆ ತಲುಪಿದೆ.
ಈ ಕೂಡಲೇ ನಮ್ಮ ಜನಾಂಗದ ಪ್ರಮುಖರು ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಯಾರೋ ವೈಯಕ್ತಿಕವಾಗಿ ನೀಡುವ ಹೇಳಿಕೆಗಳಿಗೆ ಇದು ಜನಾಂಗದ ಹೇಳಿಕೆ ಎಂಬAತೆ ಇತರ ಜನಾಂಗ ಕೂಡ ಕೊಡವ ಜನಾಂಗದ ವಿರುದ್ಧ ಹರಿಹಾಯುತ್ತಿದ್ದು, ಜನಾಂಗವನ್ನು ನಿಂದಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅವರುಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅಖಿಲ ಕೊಡವ ಸಮಾಜ ನೀಡಿದೆ.
ಜನಾಂಗದ ಪ್ರತಿನಿಧಿಗಳು ಯಾರೇ ಇರಲಿ ಜನಾಂಗದ ಗೌರವವನ್ನು ಎತ್ತಿಹಿಡಿಯುವ ಹೇಳಿಕೆಗಳನ್ನು ನೀಡಬೇಕು ಎಂದು ಸಮಾಜ ಸಲಹೆಯಿತ್ತಿದೆ.
ಈ ಸಭೆಯಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.