ಕುಶಾಲನಗರ, ಏ. ೨: ಕುಶಾಲನಗರ ಅರಣ್ಯ ತಪಾಸಣಾ ಕೇಂದ್ರ ಬಳಿ ಚುನಾವಣಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ದಿನದ ೨೪ ಗಂಟೆ ಕಾಲ ವಾಹನ ತಪಾಸಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇಲ್ಲಿ ಮೂಗು ಮುಚ್ಚಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಕಲುಷಿತ ತ್ಯಾಜ್ಯ ನೇರವಾಗಿ ಕಾವೇರಿ ನದಿ ಒಡಲು ಸೇರಿ ದುರ್ನಾಥ ಬೀರುವ ಕಾರಣ ಪುರಸಭೆ ಅಧಿಕಾರಿಗಳಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕಲುಷಿತ ತುಂಬಿದ ಟ್ಯಾಂಕ್‌ನ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.
ಈ ನಡುವೆಯೂ ದುರ್ನಾಥ ಬರುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಲು ಚುನಾವಣಾ ಸಿಬ್ಬಂದಿಗಳಿಗೆ ಕಷ್ಟ ಸಾಧ್ಯವಾಗಿದೆ. ವಾಹನ ತಪಾಸಣೆ ಸಂದರ್ಭ ವಾಹನದ ಒಳಗಿರುವ ಪ್ರಯಾಣಿಕರು ಕೂಡ ಮೂಗು ಮುಚ್ಚಿ ನಿಲ್ಲುವಂತ ಸ್ಥಿತಿ ಇಲ್ಲಿ ಕಂಡು ಬಂದಿದೆ.
ಕಟ್ಟಡಗಳಿAದ ಹೊರಬರುವ ತ್ಯಾಜ್ಯಗಳನ್ನು ಸಮರ್ಪಕವಾಗಿ ಶುದ್ಧೀಕರಿಸದೆ ನೇರವಾಗಿ ಚರಂಡಿ ಮೂಲಕ ಹೊರಬಿಡುವುದೇ ಇದಕ್ಕೆಲ್ಲ ಕಾರಣವಾಗಿದೆ.
ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಲು ಸಂಪೂರ್ಣ ವಿಫಲರಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೆ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
-ಚಂದ್ರ ಮೋಹನ್