ಸೋಮವಾರಪೇಟೆ, ಏ.೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯವನ್ನು ಹೆಚ್ಚಿಸಲು ಸರಕಾರದಿಂದ ಸೂಚನೆ ಬಂದಿದೆ. ಆದರೆ ಪ್ರಸ್ತುತತೆಯಲ್ಲಿ ಕಂದಾಯ ಹೆಚ್ಚಳ ಬೇಡ ಎಂದು ಪ.ಪಂ. ವಿಶೇಷ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳ ಲಾಯಿತು.
ಇಲ್ಲಿನ ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆಯಿತು.
ಕಂದಾಯ ಪರಿಷ್ಕರಣೆ ಸಂಬAಧ ಸರ್ಕಾರದಿಂದ ಸೂಚನೆ ಬಂದಿರುವ ಬಗ್ಗೆ ಮುಖ್ಯಾಧಿಕಾರಿ ನಾಚಪ್ಪ ಅವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆಗಳು ನಡೆದು ಪ್ರತಿವರ್ಷ ಕಂದಾಯ ಏರಿಕೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಯಾವುದೇ ಹೆಚ್ಚುವರಿ ತೆರಿಗೆ ಸಂಗ್ರಹಿಸುವುದು ಬೇಡವೆಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರು ಒಮ್ಮತದ ತೀರ್ಮಾನವನ್ನು ಕೈಗೊಂಡರು. ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿನ ಸಮಸ್ಯೆಗಳ ನಿವಾರಣೆಗೆ ಸದಸ್ಯರುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈಗಾಗಲೇ ನಗರೋತ್ಥಾನ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕುಡಿಯುವ ನೀರು ಸರಬರಾಜಿಗೆ ಸಂಬAಧಿಸಿದAತೆ ವಾರ್ಷಿಕ ಟೆಂಡರ್ ಕರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣ ವ್ಯಾಪ್ತಿಯಲ್ಲಿರುವ ಶೌಚಾಲಯಗಳು ಶುಚಿತ್ವದಿಂದ ಕೂಡಿಲ್ಲ.
ತಕ್ಷಣವೇ ಎಲ್ಲಾ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡು ವಂತೆ ಅಧ್ಯಕ್ಷ ಪಿ.ಕೆ. ಚಂದ್ರು ಅವರು, ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಮರ್ಪಕವಾಗಿಲ್ಲ. ತಕ್ಷಣವೇ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.