(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಮಾ. ೩೧: ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ "ಕಿಕ್ ಸ್ಟಾರ್ಟ್" ಫುಟ್ಬಾಲ್ ಕ್ಲಬ್ ವಿವಿಧ ವಯೋಮಾನದ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿದ್ದು, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಕಾರದೊಂದಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ.

ಅಂಡರ್ ೧೧ ರಿಂದ ಅಂಡರ್ ೨೧ ವಯೋಮಾನದ ಪುರುಷ ಹಾಗೂ ಮಹಿಳಾ ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಕಿಕ್ ಸ್ಟಾರ್ಟ್ ಫುಟ್ಬಾಲ್ ತಂಡದ ನುರಿತ ತರಬೇತುದಾರರು, ಈ ವರ್ಷ ರಾಜ್ಯದಲ್ಲಿ ಮೊದಲಿಗೆ ಕೊಡಗು ಜಿಲ್ಲೆಯಲ್ಲೇ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

೪೦೦ ಕ್ಕೂ ಹೆಚ್ಚು ಆಟಗಾರರು!

ಬೆಂಗಳೂರು ಹೊರತುಪಡಿಸಿ ಕಿಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಕಿಕ್ ಸ್ಟಾರ್ಟ್ ಮುಖ್ಯ ತರಬೇತುದಾರ ರಘು ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ೪೦೦ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು.

ಅಂಡರ್ ೧೧, ೧೩, ೧೪, ೧೬, ೧೭, ೧೮ ಹಾಗೂ ೨೧ ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆಯಿತು.

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಫುಟ್ಬಾಲ್ ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಕಿಕ್ ಸ್ಟಾರ್ಟ್ ತರಬೇತುದಾರರ ಮುಂದೆ, ತಮ್ಮ ಆಟದ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಆಯ್ಕೆಯಾದ ಆಟಗಾರರಿಗೆ ಬೆಂಗಳೂರಿನಲ್ಲಿ ಎರಡನೇ ಹಂತದ ಆಯ್ಕೆ ಪ್ರಕ್ರಿಯೆ!

ಭಾನುವಾರ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಕಿಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಸಹಯೋಗದೊಂದಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕೊಡಗು ಜಿಲ್ಲೆಯ ವಿವಿಧ ವಯೋಮಾನದ ಫುಟ್ಬಾಲ್ ಆಟಗಾರರಿಗೆ ಎರಡನೇ ಹಂತದ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಬೆಂಗಳೂರಿನಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಕಿಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಅವರ ಸಂಪೂರ್ಣ ಖರ್ಚು, ವೆಚ್ಚಗಳನ್ನು ನೋಡಿ, ಶಿಕ್ಷಣದೊಂದಿಗೆ ಫುಟ್ಬಾಲ್ ತರಬೇತಿ ನೀಡಿ ಪ್ರತಿಷ್ಠಿತ ಲೀಗ್‌ಗಳಲ್ಲಿ ಆಡಲು ಅವಕಾಶ ಮಾಡಿಕೊಡಲಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯವು ಸಂತೋಷ್ ಟ್ರೋಫಿಯನ್ನು ೫೪ ವರ್ಷಗಳ ನಂತರ ಮುಡಿಗೇರಿಸಿಕೊಂಡಿತ್ತು.

ಸAತೋಷ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಿರುವ ಆಟಗಾರರಲ್ಲಿ ಆರು ಆಟಗಾರರು ಕಿಕ್ ಸ್ಟಾರ್ಟ್ ಫುಟ್ಬಾಲ್ ತಂಡದಲ್ಲಿ ತರಬೇತಿ ಪಡೆಯುತ್ತಿರುವ ಆಟಗಾರರಾಗಿದ್ದಾರೆ. ಅದಲ್ಲದೇ ಕೊಡಗು ಜಿಲ್ಲೆಯ ಆಟಗಾರರಿಗೆ ಕಿಕ್ ಸ್ಟಾರ್ಟ್ ಕ್ಲಬ್‌ನಲ್ಲಿ ಆಡಲು ಅವಕಾಶ ದೊರೆತರೆ, ಬೇಬಿಸ್ ಲೀಗ್,ಯೂತ್ ಲೀಗ್, ಸಿ ಡಿವಿಷನ್, ಎ ಡಿವಿಷನ್ ಹಾಗೂ ಸೂಪರ್ ಡಿವಿಷನ್ ನಂತಹ ಪ್ರತಿಷ್ಠಿತ ಲೀಗ್‌ನಲ್ಲಿ ಆಡಿ, ಭವಿಷ್ಯದಲ್ಲಿ ಭಾರತ ತಂಡದಲ್ಲಿ ಆಡುವಂತಹ ಅವಕಾಶ ಸಿಗಲಿದೆ.