ಮಡಿಕೇರಿ, ಮಾ. ೩೧: ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹೈವೋಲ್ಟೇಜ್ ಕದನವಾಗಿ ಮಾರ್ಪಡುವಲ್ಲಿ ಯಾವುದೇ ಸಂಶಯವಿಲ್ಲ.
ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಫೈಟ್ ನಡೆಯುತ್ತಲೇ ಇದ್ದು, ಕಾಂಗ್ರೆಸ್ ವೀರಾಜಪೇಟೆ ಕ್ಷೇತ್ರ ಅಭ್ಯರ್ಥಿಯಾಗಿ ಎ.ಎಸ್. ಪೊನ್ನಣ್ಣ ಅವರ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಇದೀಗ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆಯ ಹುರಿಯಾಳುಗಳು ಯಾರಾಗಲಿದ್ದಾರೆ ಎಂಬ ಕುತೂಹಲವಿದೆ.
ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ನಾಪಂಡ ಮುತ್ತಪ್ಪ ಕಳೆದ ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಉತ್ತರ ಕೊಡಗಿನ ಭಾಗದಲ್ಲಿ ಜೆಡಿಎಸ್ ಉತ್ತಮವಾಗಿ ಸಂಘಟನೆಯಾಗಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿ ಇದ್ದು, ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎ. ಜೀವಿಜಯ ಅವರು ಇದೀಗ ಕೈ ಪಾಳಯದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಪಂಚರತ್ನ ಯೋಜನೆಗಳನ್ನು ಮಡಿಕೇರಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಮನೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುತೇಕ ನಾಪಂಡ ಮುತ್ತಪ್ಪನವರಿಗೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆ ಇದ್ದರೂ ಸಹ, ಜೆಡಿಎಸ್ ವರಿಷ್ಠರು ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಕಾಯುತ್ತಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ನಾಪಂಡ ಮುತ್ತಪ್ಪ ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಹಾಗೂ ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ಪುಷ್ಪಾವತಿ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ನಾಪAಡ ಮುತ್ತಪ್ಪನವರಿಗೆ ಮಡಿಕೇರಿ ಕ್ಷೇತ್ರದ ಟಿಕೆಟ್ ನೀಡುವುದಕ್ಕೆ ಸಂಬAಧಿಸಿದAತೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಬಣ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
ಕೆಲ ದಿನಗಳ ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ನಾಪಂಡ ಮುತ್ತಪ್ಪನವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಇದುವರೆಗೆ ಅಭ್ಯರ್ಥಿ ಘೋಷಣೆಯಾಗಿಲ್ಲ, ತಾವೇ ಸ್ವತಃ ಅಭ್ಯರ್ಥಿ ಎಂದು ಪ್ರಚಾರ ಪಡಿಸಬೇಡಿ ಎಂದು ನೋಟಿಸ್ ನೀಡಿದ್ದರು.
ನಾಪಂಡ ಮುತ್ತಪ್ಪನವರಿಗೆ ಟಿಕೆಟ್ ನೀಡದೆ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ಜೆಡಿಎಸ್ ವರಿಷ್ಠರಿಗೆ ಜಿಲ್ಲೆಯ ಜೆಡಿಎಸ್ ಬಣವೊಂದು ಒತ್ತಾಯ ಮಾಡಿದ್ದಾರೆ.
ನಾಪಂಡ ಮುತ್ತಪ್ಪನವರಿಗೆ ಮಡಿಕೇರಿ ಕ್ಷೇತ್ರದ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ಜೆಡಿಎಸ್ ಮೂಲಗಳಿಂದ ಮಾಹಿತಿ ಲಭಿಸಿದ್ದು ಅಂತಿಮವಾಗಿ ಜೆಡಿಎಸ್ ಪ್ರಾಬಲ್ಯವಿರುವ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಯಾರಿಗೆ ಮಣೆ ಹಾಕುತ್ತೆ ಎಂದು ಇನ್ನೂ ಸ್ಪಷ್ಟ ಚಿತ್ರಣ ಲಭಿಸಿಲ್ಲ.
ವೀರಾಜಪೇಟೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್!
ಜೆಡಿಎಸ್, ಪಕ್ಷ ಸಂಘಟನೆಯಲ್ಲಿ ಹಿಂದುಳಿದಿರುವ ವೀರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕೆ.ಎಂ ಮಂಜುನಾಥ್ ಕೂಡ ವೀರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವೀರಾಜಪೇಟೆ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಕೇತ್ ಪೂವಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ವೀರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ, ಜೆಡಿಎಸ್ ಪ್ರಭಾವವಿರುವ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿರುವ ಲೆಕ್ಕಾಚಾರ ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ ಜಾತ್ಯತೀತ ಮತಗಳು ವಿಭಜನೆಯಾಗದಂತೆ ಎ.ಎಸ್ ಪೊನ್ನಣ್ಣ ಅವರಿಗೆ ಬೆಂಬಲ ಸೂಚಿಸಿ, ನಾಮಕಾವಸ್ಥೆಗೆ ಜೆಡಿಎಸ್ ಅಭ್ಯರ್ಥಿಯನ್ನು ವೀರಾಜಪೇಟೆಯಲ್ಲಿ ಕಣ್ಣಕ್ಕಿಳಿಸುವ ಸಾಧ್ಯತೆ ಕೂಡ ತಳ್ಳಿಹಾಕುವಂತಿಲ್ಲ.
ಜೆಡಿಎಸ್ ಅಭ್ಯರ್ಥಿಗಳ ಮೊದಲನೇ ಪಟ್ಟಿ ಘೋಷಣೆಯಾಗಿದ್ದು, ಕಾಂಗ್ರೆಸ್ ಎರಡನೇ ಪಟ್ಟಿ ಘೋಷಣೆಯಾದ ಬಳಿಕ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠರು ಯಾರಿಗೆ ಟಿಕೆಟ್ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ