ಸೋಮವಾರಪೇಟೆ ತಾಲೂಕಿನ ಉತ್ತರ ಭಾಗದಲ್ಲಿರುವ ಕೊಡ್ಲಿಪೇಟೆಯ ಕಿರಿಕೊಡ್ಲಿ ಗ್ರಾಮದಲ್ಲಿರುವ ಕಿರಿಕೊಡ್ಲಿ ಮಠವು ಜ್ಞಾನ, ಅನ್ನ ದಾಸೋಹ ದೊಂದಿಗೆ ಧಾರ್ಮಿಕ ನೆಲೆಯಾಗಿ ಬೆಳೆದುಬಂದಿದೆ. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳೊಂದಿಗೆ ವಿದ್ಯಾಕ್ಷೇತ್ರದಲ್ಲೂ ಹೆಸರು ಮಾಡುತ್ತಿರುವ ಶ್ರೀಮಠವು ಶ್ರೀ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ.

ಕೊಡ್ಲಿಪೇಟೆ ಪಟ್ಟಣದಿಂದ ೨ ಕಿ.ಮೀ. ಅಂತರದಲ್ಲಿರುವ ಕಿರಿಕೊಡ್ಲಿ ಮಠವು ಇಂದು ಈ ಭಾಗ ಮಾತ್ರವಲ್ಲದೇ ಹೊರ ಜಿಲ್ಲೆಗಳ ಸಾವಿರಾರು ಭಕ್ತಾದಿಗಳ ನಂಬಿಕೆಯ ಕ್ಷೇತ್ರವಾಗಿ ರೂಪುಗೊಂಡಿದೆ. ಕೊಡಗಿನ ರಾಜರು ದಾನವಾಗಿ ನೀಡಿದ ಜಾಗವನ್ನು ವಾಪಸ್ ಪಡೆದುಕೊಂಡು ಆಸ್ತಿಯಿಲ್ಲದ ಮಠವನ್ನಾಗಿ ಮಾಡಿದ್ದು, ತದನಂತರ ಭಕ್ತರೇ ಸೇರಿಕೊಂಡು ಮಠಕ್ಕೆ ಶಕ್ತಿ ತುಂಬಿದ್ದು ಇತಿಹಾಸ.

ಶ್ರೀಉರಿಬಸವ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿದ್ದ ಶ್ರೀಮಠಕ್ಕೆ ಕೊಡಗಿನ ರಾಜರು ಜಾಗವನ್ನು ದಾನವಾಗಿ ನೀಡಿದ್ದರು. ಇದರಿಂದಾಗಿ ಶ್ರೀಮಠವು ವೈಭವಯುತವಾಗಿತ್ತು. ಜನ ಸೇವೆಯಲ್ಲಿ ತೊಡಗಿಸಿಕೊಂಡು ಅನ್ನದಾಸೋಹ ಹಾಗೂ ಜ್ಞಾನ ದಾಸೋಹದ ತವರೂರಾಗಿ ಈ ಭಾಗದ ಭಕ್ತರಲ್ಲಿ ಪ್ರಸಿದ್ಧಿ ಪಡೆದಿತ್ತು. ತದನಂತರ ಶ್ರೀಮಠವನ್ನು ಅನೇಕ ಸ್ವಾಮೀಜಿಗಳು ಮುನ್ನಡೆಸಿ ದರು. ಶ್ರೀಮಹಾಂತ ಸ್ವಾಮೀಜಿಗಳು ಮಠದ ಉಸ್ತುವಾರಿ ವಹಿಸಿಕೊಂಡಿದ್ದ ಸಂದರ್ಭ ಈ ಭಾಗದ ಪಾಳೇಗಾರರು ಹಾಗೂ ಸ್ವಾಮೀಜಿಗಳ ನಡುವೆ ವೈಮನಸ್ಸು ಉಂಟಾಯಿತು. ಪಾಳೇಗಾರರು ಕೊಡಗಿನ ರಾಜರಿಗೆ ದೂರು ನೀಡಿ ಶ್ರೀಮಠಕ್ಕೆ ನೀಡಿದ್ದ ಜಹಗೀರು ಜಾಗವನ್ನು ವಾಪಸ್ ಪಡೆದುಕೊಂಡರು. ಇದರಿಂದಾಗಿ ಶ್ರೀಮಠವು ಆಸ್ತಿಯಿಲ್ಲದ ಮಠವಾಯಿತು. ಇದನ್ನು ಗಮನಿಸಿದ ಶ್ರೀಮಠದ ಸುತ್ತಮುತ್ತ ವಿರುವ ೬೩ ಹಳ್ಳಿಯ ಜನರು ಒಂದು ಗೂಡಿ ಪಾಳೇಗಾರರಿಂದ ಅಸ್ತಿತ್ವಕ್ಕೆ ಧಕ್ಕೆಯಾಗಿರುವ ಮಠವನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದರು. ಅದರಂತೆ ಪ್ರತಿ ವರ್ಷ ಶ್ರೀಮಠಕ್ಕೆ ತಮ್ಮ ಶಕ್ತಾö್ಯನುಸಾರ ಧವಸ ಧಾನ್ಯಗಳು, ಕಾಣಿಕೆಗಳನ್ನು ನೀಡಲು ತೀರ್ಮಾನಿಸಿದರು.

ಅಂದಿನಿAದ ಕಿರಿಕೊಡ್ಲಿ ಮಠವು ಭಕ್ತರ ಅಧೀನ ಮಠವಾಗಿ ನೆಲೆಯೂರಿತು. ತಾ.೦೯.೦೫.೧೯೩೭ರಂದು ಸಿದ್ದಗಂಗಾ ಮಠಾಧೀಶರ ಕೃಪಾಶೀರ್ವಾದದೊಂದಿಗೆ ಶ್ರೀ ಗುರುಸಿದ್ಧಸ್ವಾಮಿಗಳನ್ನು ಮಠಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇವರ ಅವಧಿಯಲ್ಲಿ ಮಠವು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಮತ್ತಷ್ಟು ಹೆಸರು ಗಳಿಸಿತು. ತಾ. ೦೯.೦೫.೧೯೭೬ರಲ್ಲಿ ಪ್ರವಾಸ ಕಾಲದಲ್ಲಿ ಶ್ರೀಗುರುಸಿದ್ಧಸ್ವಾಮೀಜಿ ಆಕಸ್ಮಿಕವಾಗಿ ನಿಧನರಾದರು. ನಂತರ ೧೮.೦೪.೧೯೮೩ರಲ್ಲಿ ಸಿದ್ಧಗಂಗಾಶ್ರೀಗಳ ಸಾನ್ನಿಧ್ಯದಲ್ಲಿ, ಭಕ್ತರ ಸಮ್ಮುಖದೊಂದಿಗೆ ಶ್ರೀ ಸದಾಶಿವಸ್ವಾಮೀಜಿಗಳನ್ನು ಮಠದ ಅಧ್ಯಕ್ಷರನ್ನಾಗಿ ನೇಮಿಸ ಲಾಯಿತು.

ಅಂದಿನಿAದ ಇಂದಿನವರೆಗೂ ಶ್ರೀಮಠವು ಹಲವಷ್ಟು ಧಾರ್ಮಿಕ, ಶೈಕ್ಷಣಿಕ, ದಾಸೋಹದ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದು, ಭಕ್ತರ ಭಕ್ತಿ-ಪ್ರೀತಿಗೆ ಪಾತ್ರವಾಗಿದೆ. ಶ್ರೀಸದಾಶಿವ ಸ್ವಾಮೀಜಿಗಳ ನೇತೃತ್ವ ದಲ್ಲಿ ಮಠವು ಅಭಿವೃದ್ಧಿಗೊಳ್ಳುತ್ತಿದ್ದು, ಕೊಡ್ಲಿಪೇಟೆ ಭಾಗದಲ್ಲಿ ಖ್ಯಾತಿಗಳಿಸಿ ರುವ ಮಠಗಳ ಸಾಲಿನಲ್ಲಿದೆ. ಮಠ ದಲ್ಲಿ ಬಸವ ಜಯಂತಿ, ಲಿಂಗೈಕ್ಯ ಗುರುಗಳ ಸಂಸ್ಮರಣೆ, ಶಿವದೀಕ್ಷಾ ಸಂಸ್ಕಾರ, ಮಾಸಿಕ ಚಿಂತನಾಗೋಷ್ಠಿ, ಶಿವಾನುಭವ, ಬಡ ಮಕ್ಕಳಿಗೆ ಶ್ರೀಮಠದಲ್ಲಿ ಊಟ, ವಸತಿ ಸೌಕರ್ಯ ಕಲ್ಪಿಸುವ ಮೂಲಕ ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮುಂಚೂಣಿಯಲ್ಲಿದೆ.

೨೦೦೪-೦೫ರಲ್ಲಿ ಲಿಂಗೈಕ್ಯ ಶ್ರೀ ಗುರುಸಿದ್ಧಸ್ವಾಮಿಗಳ ಹೆಸರಿನಲ್ಲಿ, ಸಿದ್ಧಗಂಗಾಶ್ರೀಗಳಾಗಿದ್ದ ಶ್ರೀ ಶಿವಕುಮಾರಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿದ್ಯಾಪೀಠ ಸ್ಥಾಪನೆ ಮಾಡಿದ್ದು, ಶಾಲಾ-ಕಾಲೇಜುಗಳನ್ನು ಆರಂಭಿಸಿ ವಿದ್ಯಾಕ್ಷೇತ್ರದಲ್ಲಿಯೂ ಶ್ರೀ ಮಠವು ಛಾಪು ಮೂಡಿಸಿದೆ. ಪ್ರಸ್ತುತ ಮಠದ ವಿದ್ಯಾಸಂಸ್ಥೆಯಲ್ಲಿ ೬೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಪ್ರಾರ್ಥನಾ ಮಂದಿರವನ್ನು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದೆ.

ಶ್ರೀಸದಾಶಿವ ಸ್ವಾಮೀಜಿಗಳು ಮಠದ ಅಧ್ಯಕ್ಷರಾದ ನಂತರ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೇವಲ ಮಠಕ್ಕೆ ಮಾತ್ರ ಸೀಮಿತಗೊಳ್ಳದೆ ಸಾರ್ವಜನಿಕ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಸ್ವಾಮೀಜಿ ತೊಡಗಿಸಿಕೊಂಡಿದ್ದಾರೆ.

ಭಕ್ತಾದಿಗಳು, ಸರ್ಕಾರದ ಸಹಾಯಧನದೊಂದಿಗೆ ಶ್ರೀಕ್ಷೇತ್ರವು ಸಾಮಾಜಿಕವಾಗಿ ಪ್ರಗತಿ ಕಾಣುತ್ತಿದೆ. ಒಂದು ಕಾಲದಲ್ಲಿ ಆಸ್ತಿಹೊಂದಿ ನಂತರ ಆಸ್ತಿಯಿಲ್ಲದ ಮಠವಾಗಿ, ತದನಂತರ ಭಕ್ತಾದಿಗಳ ಸಹಕಾರದೊಂದಿಗೆ ಅಸ್ತಿತ್ವ ಕಾಯ್ದುಕೊಂಡ ಕಿರಿಕೊಡ್ಲಿ ಮಠವು ಇಂದು ಈ ಭಾಗದಲ್ಲಿ ಅನ್ನ, ಜ್ಞಾನ ದಾಸೋಹದ ಮೂಲಕ ಸೇವಾ ನಿರತವಾಗಿದೆ. ಭಕ್ತಾದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ನೆರಳು ನೀಡುತ್ತಿರುವ ಶ್ರೀಮಠಕ್ಕೆ ಹೊರ ಜಿಲ್ಲೆಯ ಭಕ್ತಾದಿಗಳ ಸಂಖ್ಯೆಯೂ ಅಪಾರ ಪ್ರಮಾಣದಲ್ಲಿದೆ.

ಸೋಮವಾರಪೇಟೆ ತಾಲೂಕು ಕೇಂದ್ರದಿAದ ೩೦ ಕಿ.ಮೀ. ದೂರದಲ್ಲಿರುವ, ಕೊಡ್ಲಿಪೇಟೆಯಿಂದ ೨ ಕಿ.ಮೀ. ದೂರದಲ್ಲಿ ಶ್ರೀಕಿರಿಕೊಡ್ಲಿ ಮಠವು ನೆಲೆಯಾಗಿದ್ದು, ಶ್ರೀ ಸದಾಶಿವ ಸ್ವಾಮೀಜಿಗಳು ಕಳೆದ ೧೯೮೩ರಿಂದ ಮಠಾಧ್ಯಕ್ಷರಾಗಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.

- ವಿಜಯ್ ಹಾನಗಲ್,

ಸೋಮವಾರಪೇಟೆ.