ಮಡಿಕೇರಿ, ಏ. ೧: ನಗರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಮುತ್ತಪ್ಪ ಕ್ಷೇತ್ರದಲ್ಲಿ ಭಕ್ತಾದಿಗಳಿಗಾಗಿ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, ತಾ. ೬ ರಂದು ಉದ್ಘಾಟನೆಗೊಳ್ಳಲಿದೆ.

ಮುತ್ತಪ್ಪ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭ ಅದನ್ನು ವೀಕ್ಷಿಸುವ ನಿಟ್ಟಿನಲ್ಲಿ ಭಕ್ತರಿಗಾಗಿ ಪ್ರತಿಬಾರಿ ಸುಮಾರು ೧ ಲಕ್ಷ ಹಣ ವ್ಯಯಿಸಿ ತಾತ್ಕಾಲಿಕ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿತ್ತು. ಪ್ರತಿ ಬಾರಿಯೂ ಲಕ್ಷದಷ್ಟು ಹಣ ಗ್ಯಾಲರಿಗಾಗಿಯೇ ವ್ಯಯವಾಗುತ್ತಿದ್ದುದರಿಂದ ಶಾಶ್ವತವಾಗಿ ದೇವಾಲಯದ ಆವರಣದಲ್ಲಿ ಗ್ಯಾಲರಿ ನಿರ್ಮಾಣ ಮಾಡಲು ನಿರ್ಧರಿಸಿ ದಾನಿಗಳ ಸಹಕಾರದಿಂದ ಸುಮಾರು ೩.೫೦ ಲಕ್ಷ ವೆಚ್ಚದಲ್ಲಿ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದೆ. ಮುತ್ತಪ್ಪ ಮಹಿಳಾ ವೇದಿಕೆಯವರು ಕೂಡ ಇದಕ್ಕೆ ನೆರವು ನೀಡಿದ್ದಾರೆ.

ತಾ. ೬ ರಂದು ದಾನಿಗಳಾದ ಮಾಜಿ ಸೈನಿಕ ದೇಲಂಪಾಡಿ ಗಣೇಶ್ ಮರಗೋಡು ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ‘ಶಕ್ತಿ’ಗೆ ತಿಳಿಸಿದ್ದಾರೆ.

ನೂತನವಾಗಿ ನಿರ್ಮಾಣ ಗೊಂಡಿರುವ ಗ್ಯಾಲರಿಯಲ್ಲಿ ಸುಮಾರು ೩೫೦ ಮಂದಿ ಕುಳಿತುಕೊಳ್ಳ ಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಭಕ್ತರಿಗೆ ಕೈತೊಳೆಯಲು ಅನುಕೂಲವಾಗುವಂತೆ ಆವರಣದಲ್ಲಿ ಸುಮಾರು ೫೦ ಸಾವಿರ ವೆಚ್ಚದಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಸುಮಾರು ೧೦ ಲಕ್ಷ ವೆಚ್ಚದಲ್ಲಿ ದಾನಿಗಳ ನೆರವಿನೊಂದಿಗೆ ಭವನವೊಂದನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ ಪ್ರಶ್ನೆಯಲ್ಲಿ ಬಂದಿರುವAತೆ ಸುಬ್ರಹ್ಮಣ್ಯ ಸ್ವಾಮಿ ಪೌಳಿ ಹಾಗೂ ತೀರ್ಥಮಂಟಪ ನಿರ್ಮಾಣ ಮಾಡಬೇಕಿದ್ದು,

(ಮೊದಲ ಪುಟದಿಂದ) ಇದಕ್ಕಾಗಿ ಸುಮಾರು ರೂ. ೩೦ ಲಕ್ಷದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸುಧೀರ್ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ

ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ೧೪ ದೇವಾನುದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ತಾ. ೫ ರಿಂದ ತಾ. ೮ರ ವರೆಗೆ ನಡೆಯಲಿದೆ. ತಾ. ೫ ರಂದು ಸಂಜೆ ೬.೩೦ ರಿಂದ ಪ್ರಾರ್ಥನೆ, ಪುಣ್ಯಾಹ ಸಪ್ತ ಶುದ್ಧಿ ಪ್ರಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

ತಾ. ೬ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ೧೦ ಗಂಟೆಗೆ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ೧೧ ಗಂಟೆಗೆ ನಾಗದೇವರಿಗೆ ತಂಬೀಲ ಸಮರ್ಪಣೆ, ೧೧.೩೦ಕ್ಕೆ ಕಲಶಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ ೪ ಗಂಟೆಗೆ ಧ್ವಜಾರೋಹಣ, ೪.೩೦ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೫.೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ೬.೩೦ಕ್ಕೆ ಶ್ರೀ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ, ೭.೩೦ ಗಂಟೆಗೆ ಭಕ್ತಾದಿಗಳಿಂದ ಹರಕೆ ಕೋಲಗಳು ನಡೆಯಲಿವೆ.

ತಾ. ೭ ರಂದು ಸಂಜೆ ೪ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೪.೩೦ಕ್ಕೆ ಶಾಸ್ತಪ್ಪ ದೇವರ ವೆಳ್ಳಾಟಂ, ಸಂಜೆ ೫.೩೦ ಗಂಟೆಗೆ ಗಾಂಧಿ ಮೈದಾನದಿಂದ ಕಲಶ ಹಾಗೂ ತಾಲಾಪೊಲಿ ಮೆರವಣಿಗೆ ನಡೆಯಲಿದೆ. ರಾತ್ರಿ ೭ ಗಂಟೆಗೆ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ ೮.೪೦ ರಿಂದ ೧೦.೩೦ರ ವರೆಗೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ೯.೩೦ ಗಂಟೆಗೆ ಶ್ರೀ ಪೋದಿ ವೆಳ್ಳಾಟಂ, ೧೦.೩೦ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ ೧೨ ಗಂಟೆಗೆ ಶ್ರೀ ಶಿವಭೂತ ತೆರೆ, ೧ ಗಂಟೆಗೆ ಗುಳಿಗ ತೆರೆ, ೨ ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, ೨.೩೦ ಗಂಟೆಗೆ ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ. ತಾ. ೮ ರಂದು ಬೆಳಿಗ್ಗೆ ೪ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ, ೫ ಗಂಟೆಗೆ ವಿಷ್ಣು ಮೂರ್ತಿ ದೇವರ ಮೇಲೇರಿ, ೮ ಗಂಟೆಗೆ ಶ್ರೀ ಪೋದಿ ತೆರೆ, ೯.೩೦ ಗಂಟೆಗೆ ವಿಷ್ಣು ಮೂರ್ತಿ ದೇವರ ಬಾರಣಿ, ೧೧.೩೦ಕ್ಕೆ ಧ್ವಜ ಅವರೋಹಣ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಗಳು ಕೇರಳದ ಪಯ್ಯನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿ ಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟಿ ಮಡೆಯಚ್ಚನ್ ಬ್ಲಾತೂರು ಚಂದ್ರನ್ ಮಡೆಯಚ್ಚನ್ ಇವರುಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮುತ್ತಪ್ಪ, ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ದಾಮನ್ ತಿಳಿಸಿದ್ದಾರೆ.