ಚೆಟ್ಟಳ್ಳಿ, ಮಾ. ೩೧: ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕ ಉಮೇಶ್ ನೇತೃತ್ವದಲ್ಲಿ ಚೆಟ್ಟಳ್ಳಿ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಜನಸಂಪರ್ಕ ಸಭೆ ನಡೆಯಿತು.
ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಆರ್.ಟಿ.ಓ.ದೊಂದಿಗೆ ಜಂಟಿ ಸರ್ವೆ ಮಾಡಿ ಅಪಾಯಕಾರಿ ರಸ್ತೆಗೆ ಸೂಚನಾ ಫಲಕ ಹಾಕುವ ಬಗ್ಗೆ ತಿಳಿಸಲಾಯಿತು. ಕತ್ತಲೆಕಾಡು ರಸ್ತೆಯಲ್ಲಿ ಕೇಬಲ್ ಅಳವಡಿಸಲು ಚರಂಡಿ ಮಾಡಿದವರ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದರು.
ಚೆಟ್ಟಳ್ಳಿ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಪೊರಿಮಂಡ ದಿನಮಣಿ ಪೂವಯ್ಯ ತಿಳಿಸಿದರು. ಹಿರಿಯರಿಗೆ, ಮಕ್ಕಳಿಗೆ ಪಾಸ್ ಪೋರ್ಟ್ ಪರಿಶೀಲನೆ ಮಾಡಿಸುವ ಸಂದರ್ಭ ಚೆಟ್ಟಳ್ಳಿ ಉಪ ಠಾಣೆಯಲ್ಲಿ ಅವಕಾಶ ನೀಡಬೇಕೆಂದು ಮೊಹಮದ್ ರಫಿ ಜಾಬೀರ್ ಒತ್ತಾಯಿಸಿದರು. ವಿವಿಧ ನಿಯಮಗಳ ಬಗ್ಗೆ ಸೂಚನೆ ನೀಡಲಾಯಿತು.ಈ ಸಂದರ್ಭ ತೋಟದ ಮಾಲೀಕರು, ಹೋಮ್ ಸ್ಟೇ ಮಾಲೀಕರು, ಕಾರ್ಮಿಕರು, ವಾಹನ ಹಾಗೂ ಆಟೋ ಚಾಲಕರು, ಸಾರ್ವಜನಿಕರು ಹಾಜರಿದ್ದರು. ಚೆಟ್ಟಳ್ಳಿ ಠಾಣಾಧಿಕಾರಿ ದಿನೇಶ್ ಟಿ.ಆರ್., ಸಿಬ್ಬಂದಿಗಳಾದ ಉಮೇಶ್ ಮಾಳಿ, ಮಂಜುನಾಥ್ ಬಿ.ಆರ್. ಹಾಜರಿದ್ದರು.