ಸಿದ್ದಾಪುರ, ಮಾ. ೩೦: ಸಮೀಪದ ಮಾಲ್ದಾರೆಯಲ್ಲಿ ಸಂಜೀವಿನಿ ಒಕ್ಕೂಟದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.

ಪ್ರಾಥಮಿಕ ಶಾಲಾ ಸಮೀಪದ ಮೈದಾನದಲ್ಲಿ ಗ್ರಾಮದ ಮಹಿಳೆಯರಿಗೆ ಪಾಸಿಂಗ್ ಬಾಲ್, ಹಗ್ಗಜಗ್ಗಾಟ, ಮ್ಯೂಸಿಕಲ್ ಚೇರ್, ಗುಂಡು ಎಸೆತ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಮಹಿಳೆಯರು ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ಬಹುಮಾನ ಸ್ವೀಕರಿಸಿದರು. ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗಾಗಿ ಕ್ರೀಡಾಕೂಟ ಗಳನ್ನು ಆಯೋಜಿಸುವ ಮೂಲಕ ಮಾದರಿಯಾಗಿರುವ ಸಂಜೀವಿನಿ ಒಕ್ಕೂಟ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿದೆ.

ಸಂಘಟನೆಯ ಮೂಲಕ ಗ್ರಾಮೀಣ ಭಾಗದ ಹಲವಾರು ಮಹಿಳೆಯರು ಸ್ವಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಪಿ.ಎನ್. ಉಷಾ ಮಾತನಾಡಿ, ವಿವಿಧ ಸೇವಾ ಸಾಧನೆಗಳಿಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳು ದೊರೆತಿದ್ದು ಗ್ರಾಮೀಣ ಭಾಗದ ಮಹಿಳೆಯರು ಸಂಘಟನೆಯ ಮೂಲಕ ಶಕ್ತರಾಗಿ ಸೇವೆಯೊಂದಿಗೆ ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ, ಸರಸ್ವತಿ, ಮಾಲತಿ, ಕುಂಞಣ್ಣ, ಮಾಜಿ ಸದಸ್ಯ ರಘು ಕರುಂಬಯ್ಯ, ಲಿಯೋರ ಗೋಲ್ಡ್ ಪ್ರಮುಖರಾದ ರೋಬಿನ್, ಶಿಜೋ, ಲಿಯಾನ್, ಜಯಶ್ರೀ, ಸತೀಶ್, ಸಂಜೀವಿನಿ ಒಕ್ಕೂಟದ ಲೀನಾ, ದಿವ್ಯ, ಅಮ್ಮವಾಹಾ, ಹೇಮಾವತಿ, ರೋಶಿ, ಸುಜಾ, ಮಂಜುಳ, ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.