ಪಾಲಿಬೆಟ್ಟ, ಮಾ. ೩೦: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕೂಡಗು ಶಾಖೆ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರ, ಗ್ರಾಮ ಪಂಚಾಯಿತಿ ಚೆನ್ನಯ್ಯನಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಚೆನ್ನಯ್ಯನಕೋಟೆ, ಸಹರಾ ಯೂತ್ ಕ್ಲಬ್ ಆಶ್ರಯದಲ್ಲಿ ಹಾಗೂ ರಾಘು ಅವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಚೆನ್ನಯ್ಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ. ಕರುಂಬಯ್ಯ ಮಾತನಾಡಿ, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ರಕ್ತನಿಧಿ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಕೊರತೆ ನಿವಾರಣೆಯಾಗುತ್ತದೆ. ಸ್ವಯಂ ಪ್ರೇರಿತ ರಕ್ತದಾನ ಮಾಡಲು ಜನ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶಿವಪ್ಪ ಗೊಟ್ಯಾಳ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇತರರ ಜೀವ ಉಳಿಸಿದಂತಾಗುತ್ತದೆ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಶಿಬಿರದಲ್ಲಿ ೨೦ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಈ ಸಂದರ್ಭ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ದಲಿತ ಸಂಘದ ಸಮಿತಿ ಅಧ್ಯಕ್ಷ ಮನು, ಶಾಲಾ ಮುಖ್ಯೋಪಾಧ್ಯಾಯ ಸಿದ್ದರಾಮಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಕೊಡಗು ಶಾಖೆಯ ಕುಸುಮ, ಕೃತಿ, ತನಿಶ್, ಹೇಮಾ, ರಕ್ಷಿತ್, ಮುಂತಾದವರು ಹಾಜರಿದ್ದರು.