ಮಡಿಕೇರಿ, ಮಾ. ೩೦: ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೊಡಗಿನ ೧೪ ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್ ತಪಾಸಣೆ ಬಿರುಸುಗೊಂಡಿದೆ. ೩ ಅಂರ‍್ರಾಜ್ಯ ಹಾಗೂ ೧೧ ಅಂತರ್ ಜಿಲ್ಲಾ ಚೆಕ್ ಪೋಸ್ಟ್ಗಳಲ್ಲಿ ಹಗಲು-ರಾತ್ರಿ ಎನ್ನದೇ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ದಾಖಲೆ ರಹಿತ ಹಣ, ವಸ್ತುಗಳ ಸಾಗಾಟ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ. ಕೆಲವು ಚೆಕ್‌ಪೋಸ್ಟ್ಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಂದಾಯ, ಅಬಕಾರಿ, ಅರಣ್ಯ ಇಲಾಖಾ ಸಿಬ್ಬಂದಿಯೂ ತಪಾಸಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಗಡಿಗಳಲ್ಲಿ ತಪಾಸಣಾ ಕಾರ್ಯವನ್ನು ಪೊಲೀಸ್ ಇಲಾಖೆ ಕೈಗೊಂಡಿತ್ತಾದರೂ ನಿನ್ನೆದಿನ ಚುನಾವಣೆ ಘೋಷಣೆ ಆದ ಬಳಿಕ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ನಡುವೆ ಎರಡು ದಿನಗಳ ಹಿಂದೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಹಾಗೂ ಸೀರೆಗಳನ್ನು ಪೊಲೀಸರು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸAಪಾಜೆ ಚೆಕ್‌ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೨.೨ ಲಕ್ಷ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅದೇ ರೀತಿ ಆನೆಚೌಕೂರು ಚೆಕ್‌ಪೋಸ್ಟ್ನಲ್ಲಿ ಯಾವುದೇ ರಶೀತಿ ಇಲ್ಲದೆ ಸಾಗಾಟ ಮಾಡುತ್ತಿದ್ದ ನೂರಾರು ಸೀರೆಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿದು ಬಂದಿದೆ.

(ಮೊದಲ ಪುಟದಿಂದ) ಗಡಿಭಾಗದಲ್ಲಿ ತಪಾಸಣೆಗೆ ಸಂಬAಧಿಸಿದAತೆ ‘ಶಕ್ತಿ’ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಪ್ರತಿಕ್ರಿಯೆ ಬಯಸಿದಾಗ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಸಾರ್ವಜನಿಕರು ರೂ. ೫೦ ಸಾವಿರಕ್ಕೂ ಅಧಿಕ ಹಣ, ಆಭರಣ, ಇತ್ಯಾದಿ ವಸ್ತುಗಳನ್ನು ಸಾಗಾಟ ಮಾಡುವ ಸಂದರ್ಭ ಚೆಕ್‌ಪೋಸ್ಟ್ಗಳಲ್ಲಿ ಅವುಗಳಿಗೆ ಸಂಬAಧಿಸಿದ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ. ದಾಖಲಾತಿಗಳಿಲ್ಲದಿದ್ದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಗರಿಕರು ಅಗತ್ಯ ಸಹಕಾರವನ್ನು ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಹೇಳಿದರು.

ಆನೆಚೌಕೂರು: ೨೪೫ ಸೀರೆಗಳ ವಶ

ಗೋಣಿಕೊಪ್ಪಲು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಕಠಿಣವಾಗಿ ಜಾರಿಗೊಳಿಸಿದ್ದು ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ. ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಕೆಲಸ ನಡೆಯುತ್ತಿದೆ.

ಕೊಡಗಿನ ಗಡಿ ಭಾಗವಾದ ತಿತಿಮತಿ ಸಮೀಪದ ಆನೆಚೌಕೂರು ಗಡಿಯಲ್ಲಿ ನಿಯೋಜನೆಗೊಂಡಿರುವ ಚುನಾವಣಾ ಅಧಿಕಾರಿಗಳು ಹೊರ ಜಿಲ್ಲೆಯಿಂದ ಗಡಿಗೆ ಆಗಮಿಸುತ್ತಿರುವ ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ದಿನದ ೨೪ ಗಂಟೆಯೂ ಅಧಿಕಾರಿಗಳು ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದು ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕ್ರಮಕೈಗೊಂಡಿದ್ದಾರೆ.ಮೇ ೧೦ ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಚುನಾವಣಾ ಆಯೋಗವು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಅಧಿಕಾರಿಗಳನ್ನು ವಿವಿಧ ತಂಡದಲ್ಲಿ ನಿಯೋಜನೆ ಮಾಡಿದ್ದಾರೆ. ತಾ. ೨೯ ರಂದು ಈ ಬಗ್ಗೆ ಅಧಿಸೂಚನೆ ಪ್ರಕಟಗೊಂಡಿದ್ದು ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಿತಿಮತಿ ಬಳಿಯ ಆನೆಚೌಕೂರು ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಗೋಣಿಕೊಪ್ಪ ಠಾಣಾಧಿಕಾರಿ ಟಿ. ಸಿದ್ದರಾಜು ಹಾಗೂ ಸಿಬ್ಬಂದಿಗಳು ವಾಹನವನ್ನು ತಪಾಸಣೆಗೆ ಒಳಪಡಿಸಿದ ವೇಳೆ ಕಾರೊಂದರಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಸಾಗಿಸುತ್ತಿದ್ದ ೨೪೫ ಸೀರೆಗಳೊಂದಿಗೆ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೀರೆಯ ಮೌಲ್ಯ ರೂ. ೧.೬೫ ಲಕ್ಷವಾಗಿದೆ.

ವಾಹನ ಚಾಲಕರನ್ನು ವಿಚಾರಣೆಗೊಳಪಡಿಸಿದ ವೇಳೆ ಸೂಕ್ತ ದಾಖಲಾತಿಗಳು ಪೊಲೀಸರಿಗೆ ಲಭಿಸಿಲ್ಲ. ಹೀಗಾಗಿ ಸೀರೆಗಳನ್ನು ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನವೆ ಈ ಪ್ರಕರಣ ದಾಖಲಾಗಿವೆ. ಕೊಡಗು ಜಿಲ್ಲೆಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಇದು ಮೊದಲ ಪ್ರಕರಣವಾಗಿದೆ.

ಭಯದಲ್ಲಿ ಕರ್ತವ್ಯ ನಿರ್ವಹಣೆ

ಆನೆಚೌಕೂರು ಗಡಿಯಲ್ಲಿ ಪೊಲೀಸರ ಒಂದು ತಂಡ ಹಾಗೂ ಚುನಾವಣಾ ಅಧಿಕಾರಿಗಳ ಒಂದು ತಂಡ ಪ್ರತಿ ದಿನ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಪ್ರತಿ ವಾಹನಗಳನ್ನು ಹಾಗೂ ಬಸ್‌ಗಳನ್ನು ತಪಾಸಣೆಗೆ ಒಳ ಪಡಿಸಿದ ನಂತರ ವಾಹನಗಳನ್ನು ಕಳುಹಿಸಿಕೊಡಲಾಗುತ್ತಿದೆ. ಗಡಿಯಲ್ಲಿ ಕಾಡಾನೆ - ಹುಲಿ ಸೇರಿದಂತೆ ಇನ್ನಿತರ ವನ್ಯ ಪ್ರಾಣಿಗಳ ಓಡಾಟ ಇರುವುದರಿಂದ ಇಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಭಯದ ವಾತಾವರಣ ಕಾಡುತ್ತಿದೆ. ಅಲ್ಲದೆ ಈ ಭಾಗದಲ್ಲಿ ಬೆಳಕಿನ ವ್ಯವಸ್ಥೆಗಳಿಲ್ಲ. ಗೇಟ್ ಬಳಿ ಮಾತ್ರ ಸೋಲಾರ್ ದೀಪ ಹೊರತುಪಡಿಸಿ ಇತರ ಭಾಗದಲ್ಲಿ ಯಾವುದೇ ಬೆಳಕಿನ ಸೌಕರ್ಯಗಳಿಲ್ಲ. ಹೀಗಾಗಿ ರಾತ್ರಿಯ ಪಾಳಿಯದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಸಮಸ್ಯೆ ಎದುರಾಗಿದೆ.

ಕರ್ತವ್ಯ ನಿರತ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಶೌಚಾಲಯಗಳಿಲ್ಲದೆ ಸಮೀಪದ ಅರಣ್ಯ ಪ್ರದೇಶವನ್ನೇ ಅವಲಂಭಿಸಬೇಕಾದ ಅನಿವಾಂiÀið ಪರಿಸ್ಥಿತಿ ಸೃಷ್ಟಿಯಾಗಿದೆ. ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಇಲ್ಲಿನ ಸಿಬ್ಬಂದಿಗಳು ಕರ್ತವ್ಯದ ಸಂದರ್ಭ ಕುಡಿಯುವ ನೀರನ್ನು ಮನೆಯಿಂದಲೇ ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ.

ಯಾವುದೇ ಭದ್ರತೆಯಿಲ್ಲದೆ ತಗಡಿನಿಂದ ಮಾಡಿರುವ ಶೆಡ್‌ಗಳಲ್ಲಿ ಅಧಿಕಾರಿಗಳು ಕುಳಿತು ಕೆಲಸ ನಿರ್ವಹಿಸಬೇಕಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಕಾಡಾನೆಗಳು ರಾತ್ರಿಯ ವೇಳೆ ಓಡಾಡುತ್ತಿರುತ್ತವೆ. ಇದರಿಂದ ರಕ್ಷಣೆ ಪಡೆಯಲು ಗುಣಮಟ್ಟದ ಶೆಡ್ ನಿರ್ಮಾಣ ಅವಶ್ಯಕವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಲು ನಾಗರಿಕರು ಮನವಿ ಮಾಡಿದ್ದಾರೆ. ಹೊರ ಜಿಲ್ಲೆ, ರಾಜ್ಯದಿಂದ ಬರುವ ಪ್ರತಿ ವಾಹನಗಳನ್ನು ಸಿಸಿ ಕ್ಯಾಮೆರಾದ ಮೂಲಕ ಪರಿಶೀಲಿಸಲಾಗುತ್ತಿದೆ.

ಕೇರಳ ಗಡಿ: ಕೇರಳ ಗಡಿಭಾಗವಾದ ಕುಟ್ಟ ಬಳಿಯು ತಪಾಸಣೆ ಕಾರ್ಯ ನಡೆಸುತ್ತಿದ್ದು ಕೇರಳ ರಾಜ್ಯದಿಂದ ಬರುವ ವಾಹನಗಳ ಮೇಲೆ ಚುನಾವಣಾ ಅಧಿಕಾರಿಗಳು ವಿಶೇಷ ಗಮನ ಹರಿಸಿದ್ದಾರೆ. ಪ್ರತಿ ವಾಹನಗಳನ್ನು ತಪಾಸಣೆಗೊಳಪಡಿಸಿದ ನಂತರವಷ್ಟೇ ವಾಹನಗಳನ್ನು ಬಿಡಲಾಗುತ್ತಿದೆ. ದಿನದ ೨೪ ಗಂಟೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಲವು ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆ ಆಯೋಗದ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಕರಿಕೆ: ರಾಜ್ಯ ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗವಾದ ಕರಿಕೆ ಚೆಕ್‌ಪೋಸ್ಟ್ನಲ್ಲಿ ತಪಾಸಣೆ ಚುರುಕುಗೊಂಡಿದೆ. ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಲ್ಲೊಂದಾದ ಕರಿಕೆ-ಚೆಂಬೇರಿ ಬಳಿಯ ಚೆಕ್‌ಪೋಸ್ಟ್ನಲ್ಲಿ ಪೊಲೀಸರು ಜಿಲ್ಲೆಗೆ ಪ್ರವೇಶಿಸುವ ಹಾಗೂ ಹೊರ ಹೋಗುವ ಪ್ರತಿ ವಾಹನಗಳ ಮೇಲೆ ನಿಗಾವಹಿಸಿದ್ದು, ವಾಹನಗಳನ್ನು ತಪಾಸಣೆಗೆ ಒಳಪಡಿಸಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ವಿಶೇಷವಾಗಿ ತಪಾಸಣಾ ಠಾಣೆ ನಿರ್ಮಿಸಲಾಗಿದೆ.

ಮಾಕುಟ್ಟದಲ್ಲಿ ಕಟ್ಟೆಚ್ಚರ

ವೀರಾಜಪೇಟೆ ತಾಲೂಕು ಪಕ್ಕದ ಕೇರಳದ ಜೊತೆ ಗಡಿ ಹಂಚಿಕೊAಡಿರುವ ಮಾಕುಟ್ಟ ಗಡಿ ಚೆಕ್‌ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ ಆರಂಭಿಸಲಾಗಿದೆ. ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಎಲ್ಲ ಒಳ ರಸ್ತೆಗಳಲ್ಲಿ ಕೂಡ ಪೊಲೀಸ್ ಬೀಟ್ ಅಳವಡಿಸಲಾಗಿದೆ.

ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಚೆಕ್‌ಪೋಸ್ಟ್ನಲ್ಲಿ ಜಿಲ್ಲೆಗೆ ಆಗಮಿಸುವ ವಾಹನ ತಪಾಸಣೆ ಮಾಡುತ್ತಿದ್ದಾರೆ. ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಕಳುಸುತ್ತಿದ್ದಾರೆ. ಇದಲ್ಲದೆ ಕಸ್ಟಮ್ಸ್ ಚೆಕ್‌ಪೋಸ್ಟ್ಗಳು ಕಾರ್ಯಾಚರಿಸುತ್ತಿದ್ದು, ಅಕ್ರಮ ಸಾಗಣೆ, ಹಣ, ವಸ್ತು ಸಾಗಾಟ ಸೇರಿದಂತೆ ಎಲ್ಲಬಗೆಯ ಅಕ್ರಮಗಳನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರಿ ದಳ ರಚಿಸಲಾಗಿದ್ದು, ಪ್ರತೀ ತಂಡದಲ್ಲಿ ಪೊಲೀಸರು ಮತ್ತು ಇತರ ಅಧಿಕಾರಿಗಳಿರುತ್ತಾರೆ. ಈ ತಂಡಗಳು ಕ್ಷೇತ್ರದೆಲ್ಲೆಡೆ ತಿರುಗಾಡುತ್ತಾ ತಪಾಸಣೆ ನಡೆಸುತ್ತಿವೆ.

ಶಿರಂಗಾಲದಲ್ಲಿ ತಪಾಸಣೆ

ಕೂಡಿಗೆ: ಕೊಡಗು-ಹಾಸನ ಗಡಿಯಾದ ಶಿರಂಗಾಲದಲ್ಲಿ ತಪಾಸಣೆ ಕಾರ್ಯವನ್ನು ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರಂಭಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ಗಡಿಭಾಗವಾದ ಶಿರಂಗಾಲ ಚೆಕ್‌ಪೋಸ್ಟ್ನಲ್ಲಿ ಜಿಲ್ಲೆಯ ಚುನಾವಣಾ ಅಧಿಕಾರಿಗಳ ಸೂಚನೆಯಂತೆ ತಪಾಸಣೆಯ ಕಾರ್ಯದಲ್ಲಿ ತೊಡಗಿವೆೆ.

ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ, ಲೆಕ್ಕಾಧಿಕಾರಿ ಗುರುದರ್ಶನ್ ಸೇರಿದಂತೆ ಚುನಾವಣಾ ನಿಮಿತ್ತ ನೇಮಕವಾಗಿರುವ ಫ್ಲೆಯಿಂಗ್ ಸೆಕ್ಟರ್ ಅಧಿಕಾರಿ ವರ್ಗದವರು ಚೆಕ್‌ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಶಾಲನಗರದಲ್ಲಿ ಕಟ್ಟೆಚ್ಚರ

ಕುಶಾಲನಗರ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು-ಮೈಸೂರು ಗಡಿ ಭಾಗ ಕುಶಾಲನಗರದಲ್ಲಿ ಪೊಲೀಸರು ಮುನ್ನೆಚ್ಚರಿಕೆಯಾಗಿ ವಾಹನಗಳ ತಪಾಸಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಕುಶಾಲನಗರ ಪೊಲೀಸರು ಮೈಸೂರು ಜಿಲ್ಲೆಯಿಂದ ಕೊಡಗು ಜಿಲ್ಲೆ ಕಡೆಗೆ ಬರುವ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನಿರ್ದೇಶನದಂತೆ ಪ್ರತಿ ವಾಹನಗಳ ಕಾರ್ಯ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ಅವರು ಕುಶಾಲನಗರದ ಗಡಿಭಾಗದ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ಉಜ್ವಲ್ ರಂಜಿತ್, ಜಗದೀಶ್, ಸುಧೀರ್,

ಇಶಾನ್ವಿ, ಚಂದ್ರಮೋಹನ್, ನಾಗರಾಜಶೆಟ್ಟಿ