ಪಾಲಿಬೆಟ್ಟ, ಮಾ. ೨೯: ಕಾಡು ಪ್ರಾಣಿಗಳ ಭಯದ ನಡುವೆ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವ ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಶಾಸಕರ ಪ್ರಯತ್ನದ ಫಲವಾಗಿ ಸಂಸದರ ಪ್ರದೇಶ ಅಭಿವೃದ್ಧಿ ನಿಧಿಯ ಮೂಲಕ ಅತ್ಯಾಧುನಿಕ ಮಾದರಿಯ ಆ್ಯಂಬ್ಯುಲೆನ್ಸ್ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಿದ್ದು, ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆAದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮನವಿ ಮಾಡಿದ್ದಾರೆ.

ಪಾಲಿಬೆಟ್ಟ ಆಸ್ಪತ್ರೆ ಆವರಣದಲ್ಲಿ ನೂತನ ಆ್ಯಂಬ್ಯುಲೆನ್ಸ್ಗೆ ಚಾಲನೆ ನೀಡಿ ಮಾತನಾಡಿ, ಪಾಲಿಬೆಟ್ಟದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆ್ಯಂಬ್ಯುಲೆನ್ಸ್ ವ್ಯವಸ್ಥೆ ಬೇಕೆಂದು ಪ್ರತಿಭಟನೆ ಮಾಡಿದ್ದರು. ವರ್ಷಗಳಿಂದಲೂ ಆ್ಯಂಬ್ಯುಲೆನ್ಸ್ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಆರೋಗ್ಯ ಇಲಾಖೆಯ ಆಯುಕ್ತರನ್ನು ಸಂಪರ್ಕಿಸಲಾಗಿತ್ತು. ಇದೀಗ ಗ್ರಾಮಸ್ಥರ ಬೇಡಿಕೆಗೆ ತಕ್ಷಣ ಸ್ಪಂದನ ಸಿಕ್ಕಿದ್ದು ಗ್ರಾಮಕ್ಕೆ ಹೊಸ ಆ್ಯಂಬ್ಯುಲೆನ್ಸ್ ಬಂದಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತು ಆ್ಯಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಟ್ಟ ಶಾಸಕರು ಹಾಗೂ ಸಂಸದರು, ಆರೋಗ್ಯ ಇಲಾಖೆಗೆ ಅಭಿನಂದನೆ ಸಲ್ಲಿಸಿದರು. ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಲೋಹಿತ್ ಮಾತನಾಡಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಹೆಚ್ಚು ವೈದ್ಯರಿದ್ದು, ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿದ್ದೇವೆ. ಇದ ರೊಂದಿಗೆ ಆ್ಯಂಬ್ಯುಲೆನ್ಸ್ ಸೇವೆಯು ಇದ್ದು, ಆಸ್ಪತ್ರೆ ಆಡಳಿತದೊಂದಿಗೆ ಕೈಜೋಡಿಸಬೇಕೆಂದರು .

ಈ ಸಂದರ್ಭ ವೈದ್ಯರುಗಳಾದ ಜಗದೀಶ್, ಸುನೀಲ್, ಬಸವಪ್ಪ, ಬಿಜೆಪಿ ಎಸ್.ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿ, ಪ್ರಮುಖರಾದ, ಅಯ್ಯಪ್ಪ, ಮನು, ರಮೇಶ್, ಸಿಬ್ಬಂದಿಗಳಾದ ಮಾಲ, ಲಲೀತ, ಮಂಜು, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.