ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ: ಉಪನೊಂದಾಣಾಧಿಕಾರಿಗೆ ಜೈಲು ಶಿಕ್ಷೆ

ಮೈಸೂರು, ಮಾ. ೨೮: ಆದಾಯ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಆರೋಪಿ ಮೈಸೂರು ಪೂರ್ವ ಉಪನೊಂದಾಣಾಧಿಕಾರಿ ಎಂ. ಗಿರೀಶ್‌ಗೆ ೪ ವರ್ಷ ಜೈಲುಶಿಕ್ಷೆ ಮತ್ತು ರೂ. ೨ ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. ಪ್ರಕರಣ ಸಂಬAಧಿಸಿದAತೆ ಗುರುಮಂಟೇಸ್ವಾಮಿ ಅವರು ನೀಡಿದ ದೂರಿನನ್ವಯ ಆಗಿನ ಪೊಲೀಸ್ ಅಧೀಕ್ಷಕ ಜಗದೀಶ್ ಪ್ರಸಾದ್ ಅವರು ಉಪನೊಂದಾಣಾಧಿಕಾರಿ, ಆರೋಪಿ ಎಂ. ಗಿರೀಶ್ ವಿರುದ್ಧ ಮೊ.ಸಂ. ೦೪/೨೦೧೪ ರಲ್ಲಿ ಕಲಂ ೧೩(೧) (ಇ), ೧೩(೨) ಪಿ.ಸಿ. ಕಾಯ್ದೆ ೧೯೮೮ ರೆ/ವಿ ೨೦೧ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ನಟರಾಜು, ಗೋಪಾಲಕೃಷ್ಣ, ಪರಶುರಾಮ್ ಹಾಗೂ ಬಾಲಕೃಷ್ಣ ಅವರು ತನಿಖೆ ನಡೆಸಿ, ಆರೋಪಿಯು ಗಳಿಸಿದ ಆಸ್ತಿಯ ಪ್ರಮಾಣವು ಶೇ. ೫೮.೭೨ ರಷ್ಟು ಅಧಿಕವಾಗಿರುವುದು ತನಿಖೆಯಿಂದ ಕಂಡುಬAದಿತ್ತು. ಆರೋಪಿಯ ವಿರುದ್ಧ ಅಂತಿಮ ವರದಿ ಜೊತೆಗೆ ೭೭ ಸಾಕ್ಷಿದಾರರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ಆರೋಪಿತರ ವಿರುದ್ಧ ಅಭಿಯೋಜನಾ ಮಂಜೂರಾತಿಯ ಆದೇಶವನ್ನು ಆಗಿನ ಮುದ್ರಾಂಕ ಆಯುಕ್ತರು ಮತ್ತು ನೋಂದಣಿ ಪರಿವೀಕ್ಷಕ ಮನೋಜ್ ಕುಮಾರ್ ಮೀನಾ ಅವರು ನೀಡಿದ್ದರು. ಈ ಪ್ರಕರಣದಲ್ಲಿ ಅಭಿಯೋಜಕರು ೧೩ ಜನರ ಸಾಕ್ಷö್ಯವನ್ನು ಪಡೆದಿದ್ದು, ಎಲ್ಲಾ ಸಾಕ್ಷಿದಾರರು ಲೋಕಾಯುಕ್ತದ ಪರವಾಗಿ ಸಾಕ್ಷಿ ನುಡಿದಿದ್ದಾರೆ, ಇದನ್ನು ಪರಿಗಣಿಸಿದ ೩ನೇ ಸತ್ರ ನ್ಯಾಯಾಲಯ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಧೀಶರಾದ ಕೆ. ಭಾಗ್ಯ ಅವರು, ಆರೋಪಿಯನ್ನು ದೋಷಿಯೆಂದು ಪರಿಗಣಿಸಿ ಕಲಂ ೧೩(೧) (ಇ), ೧೩(೨) ಪಿ.ಸಿ.ಕಾಯ್ದೆ ೧೯೮೮ಗೆ ೪ ವರ್ಷ ಕಾರಾಗೃಹ ವಾಸ ಹಾಗೂ ೨,೦೦,೦೦೦ ರೂಪಾಯಿ ಹಣ ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದಲ್ಲಿ ಸಾದಾ ಶಿಕ್ಷೆ ೧ ವರ್ಷ ಕಾರಾಗೃಹ ವಾಸ ಹಾಗೂ ಕಲಂ ೨೦೧ ಐಪಿಸಿಗೆ ೨ ವರ್ಷ, ೬ ತಿಂಗಳ ಕಾರಾಗೃಹವಾಸ, ದಂಡ ೫೦,೦೦೦/- ರೂಪಾಯಿ, ತಪ್ಪಿದಲ್ಲಿ ಸಾದಾ ಶಿಕ್ಷೆ ೬ ತಿಂಗಳ ಕಾರಾಗೃಹ ವಾಸ ಎಂಬುದಾಗಿ ಶಿಕ್ಷೆ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ಲೋಕಾಯುಕ್ತ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ವಾದ ಮಂಡಿಸಿದರು.

ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ತಯಾರಿ

ನವದೆಹಲಿ, ಮಾ. ೨೮: ಪಕ್ಷಪಾತ ಆರೋಪದ ಮೇಲೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಇತರ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಕಾಂಗ್ರೆಸ್ ನಾಯಕರು ಈ ಕುರಿತು ಇತರ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ಲೋಕಸಭೆಯಲ್ಲಿ ಸೋಮವಾರ ಈ ಪ್ರಸ್ತಾಪವನ್ನು ಮಂಡಿಸುವ ಸಾಧ್ಯತೆಯಿದೆ. ಆದರೆ ಈ ಕ್ರಮ ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಧಕ್ಕೆ ತರಬಹುದು ಎಂಬ ಕಾರಣಕ್ಕೆ ಕೆಲವು ಪಕ್ಷಗಳು ವಿರೋಧಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ ಕಾರಣಕ್ಕಾಗಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ. ಸದನ ಸುಸೂತ್ರವಾಗಿದ್ದಾಗ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಾಧ್ಯ ಎಂದು ತಿಳಿದುಬಂದಿದೆ. ಅಂತಹ ನಿರ್ಣಯಕ್ಕೆ ೫೦ ಸಂಸದರ ಸಹಿ ಮತ್ತು ಬೆಂಬಲದ ಅಗತ್ಯವಿದೆ. ಆದರೆ ಸದನ ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಲು ಅವಕಾಶ ನೀಡದೆ ಇರಬಹುದು ಎಂದು ವಿಪಕ್ಷಗಳ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಭ್ರಷ್ಟಾಚಾರ ಪ್ರಕರಣ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ವಶಕ್ಕೆ

ಬೆಂಗಳೂರು, ಮಾ. ೨೮: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿ ಶಾಸಕರ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ ೧ ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಶಾಸಕ ಕಚೇರಿ ಮತ್ತು ಮನೆಯಲ್ಲಿ ೮ ಕೋಟಿ ರೂಪಾಯಿ ಹೆಚ್ಚು ನಗದು ಪತ್ತೆಯಾಗಿತ್ತು.

ಉಮೇಶ್ ಪಾಲ್ ಅಪಹರಣ ಕೇಸು: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಪ್ರಯಾಗ್ ರಾಜ್, ಮಾ. ೨೮: ೨೦೦೬ ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರನ್ನು ಅಪರಾಧಿಗಳೆಂದು ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ನ್ಯಾಯಾಲಯ ಅತೀಕ್‌ಗೆ ಜೀವಾವಧಿ ಶಿಕ್ಷೆ ಮತ್ತು ೫,೦೦೦ ರೂಪಾಯಿ ದಂಡ ವಿಧಿಸಿದೆ. ವಿಶೇಷ ಎಂಪಿ-ಎAಎಲ್‌ಎ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಚಂದ್ರ ಶುಕ್ಲಾ ಅವರು ಅಹ್ಮದ್, ವಕೀಲ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ ಎಂದು ಸರ್ಕಾರದ ಪರ ವಕೀಲ ಗುಲಾಬ್ ಚಂದ್ರ ಅಗ್ರಹರಿ ತಿಳಿಸಿದ್ದಾರೆ. ಉಮೇಶ್ ಪಾಲ್ ಕುಟುಂಬಕ್ಕೆ ತಲಾ ೧ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಪರಾಧಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಅವರು ಹೇಳಿದರು.

ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಬೆಂಕಿ ದುರಂತ: ೩೭ ಸಾವು

ಮೆಕ್ಸಿಕೋ, ಮಾ. ೨೮: ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಟ ೩೭ ಮಂದಿ ಸಾವನ್ನಪ್ಪಿದ್ದು ಸುಮಾರು ೧೦೦ ಮಂದಿ ಗಾಯಗೊಂಡರು. ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಕಳೆದ ತಡರಾತ್ರಿ ಸುಮಾರು ೭೧ ವಲಸಿಗರನ್ನು ಕೇಂದ್ರಕ್ಕೆ ಕರೆತಂದ ಸ್ವಲ್ಪ ಸಮಯದ ಬಳಿಕ ಈ ಘಟನೆ ಸಂಭವಿಸಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ.