*ಗೋಣಿಕೊಪ್ಪ, ಮಾ. ೨೮: ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಆಯಿರಸುಳಿ ಹಾಡಿಯಲ್ಲಿ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿಯಲ್ಲಿ ಕವನಗಳ ಸಾಲುಗಳು ಮಾರ್ಧನಿಸಿದವು. ೨೮ ಕವನಗಳನ್ನು ಹೊತ್ತ ಕನವರಿಕೆಯ ಸಾಲುಗಳು ಕವನ ಸಂಕಲನ ಬಿಡುಗಡೆ, ಪ್ರಕೃತಿಯ ಮಡಿಲಿನಲ್ಲಿ ಚಪ್ಪರದ ಕೆಳಗೆ ನಡೆದ ಕಾರ್ಯಕ್ರಮ ಕವಿಗಳಿಗೆ ಮನೋಲ್ಲಾಸ ನೀಡಿತು.

ಉದ್ಘಾಟನೆ: ಗಿಡಕ್ಕೆ ನೀರೆರೆಯುವ ಮೂಲಕ ಕವಿ ಸ್ಮಿತಾ ಅಮೃತರಾಜ್ ಉದ್ಘಾಟಿಸಿ ಮಾತನಾಡಿ, ಅಚ್ಚರಿ, ಬೆರಗು ಕಾವ್ಯದ ಹುಟ್ಟಿಗೆ ಮೂಲವಾಗಲಿದೆ. ಸುಲಭವಾಗಿ ಕಾವ್ಯ ಹುಟ್ಟುವುದಿಲ್ಲ. ದೀರ್ಘಕಾಲದ ಚಿಂತನೆಯಲ್ಲಿ ಕಾವ್ಯ ತೆರೆದುಕೊಳ್ಳಲಿದೆ. ಇದರಿಂದಾಗಿ ಕವನ ಸಾಲುಗಳಲ್ಲಿ ಮೂಡಿ ಬರಲು ಸಮಯ ಕೂಡ ಮುಖ್ಯ. ಮನದಲ್ಲಿ ಹುಟ್ಟಿ ಬರುವ ಪದಗಳಿಗೆ ಏಕಾಗ್ರತೆ ಅನಿವಾರ್ಯವಾಗಿದ್ದು, ದೇವರ ಅನುಗ್ರಹದಿಂದ ಅದು ಸಾಧ್ಯವಿದೆ ಎಂದರು. ಅವಸರವಿಲ್ಲದೆ ನಿರಂತರ ಪರಿಶ್ರಮವಿಟ್ಟಾಗ ಮನಕೊಪ್ಪುವ ಕವನ ಜನ್ಮ ತಾಳಲಿದೆ ಎಂದರು.

ಕನವರಿಕೆಯ ಸಾಲುಗಳು ಕವನ ಸಂಕಲನವನ್ನು ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಬಿಡುಗಡೆಗೊಳಿಸಿ ಮಾತನಾಡಿ, ಕೊಡಗು ಪ್ರೆಸ್‌ಕ್ಲಬ್ ೨೫ ವರ್ಷ ಪೂರೈಸಿದ ನೆನಪಿಗಾಗಿ ನಡೆದ ಕವಿಗೋಷ್ಠಿಯ ಕವನಗಳು ಮುದ್ರಣದ ರೂಪದಲ್ಲಿ ಕವಿಗಳ ದಾಖಲೆಗೂ ಅವಕಾಶ ನೀಡಿದೆ ಎಂದರು. ಕುಕ್ಕೆಯಲ್ಲಿ ಬೇವಿನ ಸೊಪ್ಪು, ಬೆಲ್ಲ, ಹೂವಿನಲ್ಲಿಟ್ಟಿದ್ದ ಕವನ ಸಂಕಲನವನ್ನು ಹೊರ ತೆಗೆಯುವ ಮೂಲಕ ಉದ್ಘಾಟಿಸಲಾಯಿತು.

ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್, ಪೊನ್ನಂಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕವಿಗೋಷ್ಠಿ ಸಂಚಾಲಕ ಕೆ.ಬಿ. ಜಗದೀಶ್ ಜೋಡುಬೀಟಿ ಇದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕವಿ ಕಾಜೂರು ಸತೀಶ್, ಕಲಾವಿದನ ಮನದಲ್ಲಿ ಹುಟ್ಟಿ ಬರುವ ಸಾಕಷ್ಟು ಕಲೆಗಳು ವ್ಯಕ್ತಗೊಳ್ಳದಿದ್ದಾಗ, ಯಾರೂ ಆಲಿಸದಿದ್ದಾಗ ಕೊರಗಿನಲ್ಲಿಯೇ ದಿನದೂಡುವಂತಾಗುತ್ತದೆ. ಕಲೆ ಅನಾವರಣಗೊಳ್ಳದಿದ್ದಾಗ ಚಟಕ್ಕೆ ದಾಸ್ಯನಾಗುವಂತಾಗುತ್ತಾನೆ. ಆದರೆ, ಕವಿಗಳಿಗೆ ಕವನಗಳನ್ನು ಅಕ್ಷರದ ಮೂಲಕ ಬರೆದಿಟ್ಟಾಗ ಸಿಗುವ ಸಂಭ್ರಮ ಮನಸ್ಸು ಹಗುರವಾಗಿಸುತ್ತದೆ. ಕವನ ಬರೆಯುವುದು ಮನೋಲ್ಲಾಸ ತರುವುದಲ್ಲದೆ, ಚಿಂತಿಸಿದ ಕಾರ್ಯ ಪೂರ್ಣಗೊಂಡ ಯಶಸ್ಸು ತರುತ್ತದೆ ಎಂದರು. ಮತ್ತಷ್ಟು ಬರೆಯಬೇಕೆಂಬ ಹಂಬಲ, ಹವ್ಯಾಸ ಕವಿಯನ್ನು ಗಟ್ಟಿಯಾಗಿಸುತ್ತದೆ ಎಂದರು. ಕವನದ ಮೂಲಕ ಒಬ್ಬ ಕವಿಯನ್ನು ಎಡ, ಬಲ ಪಂಥೀಯ ಎಂಬುವುದು ನಿರ್ಧರಿಸುವುದು ಸರಿಯಲ್ಲ. ಒಂದು ಕವನದಿಂದ ವ್ಯಕ್ತಿಯನ್ನು ಜೀವನಪೂರ್ತಿ ಹಾಗೇ ಎಂದು ನಿರ್ಧರಿಸುವುದು ತಪ್ಪು ಗ್ರಹಿಕೆಯಾಗಲಿದೆ ಎಂದರು.

ಈ ಸಂದರ್ಭ ತಿತಿಮತಿ ಗ್ರಾ.ಪಂ. ಸದಸ್ಯ ಎನ್. ಅನೂಪ್, ಹಾಡಿ ಮುಖಂಡ ದಿನೇಶ್, ಕೊಡಗು ಪ್ರೆಸ್‌ಕ್ಲಬ್ ನಿರ್ದೇಶಕ ಪುತ್ತಂ ಪ್ರದೀಪ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕರಾದ ದರ್ಶನ್ ದೇವಯ್ಯ, ಎಂ.ಎA. ಚನ್ನನಾಯಕ ಇದ್ದರು.

ಜೇಂಕಾರ.. ಕವನ ಸಾಲು: ವಿಶೇಷವಾಗಿ ಚಪ್ಪರ ನಿರ್ಮಿಸಿ ಕಾರ್ಯಕ್ರಮ ನಡೆಸಲಾಯಿತು. ಹಸಿರು ಸೊಪ್ಪಿನ ಚಪ್ಪರದ ಕೆಳಗೆ ಕವಿಗಳು ತಮ್ಮ ಚಿಂತನೆಯಲ್ಲಿ ಮೂಡಿಬಂದ ಸಾಲುಗಳನ್ನು ಹಾಡುತ್ತಾ ಪ್ರಕೃತಿಗೆ ಒಪ್ಪಿಸಿದರು. ಸುತ್ತಲೂ ಜೇನುನೊಣ, ನೂರಾರು ಪಕ್ಷಿಗಳ ಜೇಂಕಾರ, ಅಲ್ಲಲ್ಲಿ ರಣಹದ್ದುಗಳ ಹಾರಾಟ ಕವಿ ಸಾಲುಗಳಿಗೆ ಮತ್ತಷ್ಟು ಉತ್ಸಾಹ ಮೂಡಿಸಿತು. ಆಗೊಮ್ಮೆ, ಈಗೊಮ್ಮೆ ಭಯ ಹುಟ್ಟಿಸುವ ಕಾಡಾನೆಗಳ ಕೂಗು ಪದ ತಪ್ಪಿಸಿತು.

ಕಾರ್ಯಕ್ರಮದಲ್ಲಿ ೨೧ ಕವಿಗಳು ಕವನ ವಾಚನ ಮಾಡಿದರು. ಸಾಮಾಜಿಕ, ಕೌಟುಂಬಿಕ, ಪ್ರಕೃತಿಯ ವಿಚಾರದಲ್ಲಿ ಕನ್ನಡ, ಯರವ ಭಾಷೆಯಲ್ಲಿ ಮೂಡಿ ಬಂದವು. ಹಾ.ತಿ. ಜಯಪ್ರಕಾಶ್, ಕೆ.ಜಿ. ರಮ್ಯ, ಕೃಪಾ ದೇವರಾಜ್, ಸಹನಾ ಕಾಂತಬೈಲು, ಸೋಮೆಯಂಡ ಕೌಶಲ್ಯ ಸತೀಶ್, ಕೆ.ಕೆ. ಸುನಿತಾ, ಮಾಲಾಮೂರ್ತಿ, ಕೆ.ಟಿ. ವಾತ್ಸಲ್ಯ, ವಿಮಲಾ ದಶರಥ, ಎಸ್.ಎಂ. ರಜನಿ, ಹೇಮಲತಾ ಪೂರ್ಣಪ್ರಕಾಶ್, ಕೆ.ಬಿ. ಜಗದೀಶ್ ಜೋಡುಬೀಟಿ, ಅಪ್ಪಿರ ಆಶಿಕ್ ಉತ್ತಯ್ಯ, ಮುಕ್ಕಾಟಿ ಹರಿಣಿ ಗಿರೀಶ್, ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಡಾ. ಅಜ್ಜಿಕುಟ್ಟೀರ ಪೂವಮ್ಮ, ಕರವಟ್ಟೀರ ಬಿ. ಅಯ್ಯಣ್ಣ, ಕೆ.ಎನ್. ಕವಿತಾ, ದೀಪಿಕಾ ರಾಘವೇಂದ್ರ, ವಿಜಯಶ್ರೀ ಅನಿಲ್ ಕೆದಿಲಾಯ ಅವರುಗಳು ಕವನ ವಾಚಿಸಿದರು.

ಪುತ್ತಾಮನೆ ವಿದ್ಯಾ ಜಗದೀಶ್, ಸಾಯಿ ಕಿರಣ್ ತಂಡದಿAದ ಯುಗಯುಗಾದಿ ಕಳೆದರೂ, ಅಚ್ಚುತಮ್ ಕೇಶವಮ್.. ಕಾವೇರಮ್ಮೆ ಓ ದೇವಿಯೇ, ಸೋಜುಗಾದ ಸೂಜು ಮಲ್ಲಿಗೆ, ಕಾಣದಂತೆ ಮಾಯವಾದನೂ ನಮ್ಮ ಶಿವ, ಬಿದ್ದಲ್ಲೆ ಬೇರೂರಿ ಗಗನಕ್ಕೆ ಹಾಡು ಹಾಡಿದರು.

ಗಿರಿಜನರು ಭೋಜನ ತಯಾರಿಸಿ ಆತಿಥ್ಯ ನೀಡಿದರು. ಪ್ರಾಕೃತಿಕವಾಗಿ ದೊರೆಯುವ ಸೊಪ್ಪು ಬಳಸಿ ಭೋಜನ ತಯಾರಿಸಲಾ ಯಿತು. ನುಗ್ಗೆ ಸೊಪ್ಪು, ಪಲ್ಯ, ಮಾವಿನ ಚಟ್ನಿ, ಕೆಸ, ಮಿಡಿ ಹಲಸು ಪಲ್ಯ ವಿಶೇಷವಾಗಿತ್ತು. ತಿತಿಮತಿ ಗ್ರಾ.ಪಂ. ಉಪಾಧ್ಯಕ್ಷೆ ವಿಜಯ, ಸದಸ್ಯೆ ಪೊನ್ನಿ, ತಿತಿಮತಿ ಪ್ಯಾಕ್ಸ್ ನಿರ್ದೇಶಕಿ ಮಂಜುಳ ಹಾಗೂ ತಂಡ ಜವಬ್ದಾರಿ ನಿಭಾಯಿಸಿದರು.