ಮಡಿಕೇರಿ, ಮಾ. ೨೯: ಕೊಡಗು ಜಿಲ್ಲೆಯನ್ನು ಕಿತ್ತಳೆ ನಾಡು ಎಂಬ ಹೆಸರಿನಿಂದ ಕರೆಯುತ್ತೇವೆ.
ಆದರೆ ವರ್ಷ ಕಳೆದಂತೆ ಕಿತ್ತಳೆ ನಾಡು ಕೊಡಗಿನಲ್ಲೇ "ಕಿತ್ತಳೆ ಹಣ್ಣು" ಗಳು ಸಿಗದೇ, ವಿಶ್ವವಿಖ್ಯಾತಿ ಪಡೆದ ಕೊಡಗಿನ ಕಿತ್ತಳೆ ಸಿಗದಂತಹ ಪರಿಸ್ಥಿತಿ ಇದೆ. ಒಂದಾನೊAದು ಕಾಲದಲ್ಲಿ ಕೊಡಗು ಎಂದರೆ ಕಿತ್ತಳೆ ಎಂದು ಹೆಸರುವಾಸಿಯಾಗಿತ್ತು.
ಅಷ್ಟರಮಟ್ಟಿಗೆ ಕೊಡಗು ಜಿಲ್ಲೆಯ ಕಿತ್ತಳೆ ಹಣ್ಣು ವಿಶ್ವಪ್ರಖ್ಯಾತಿ ಪಡೆದಿತ್ತು. ರುಚಿಕರವಾದ ದೊಡ್ಡ ಗಾತ್ರದ ಕಿತ್ತಳೆ ಹಣ್ಣುಗಳನ್ನು ಕೊಡಗು ಜಿಲ್ಲೆಯಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಕೊಡಗಿನ ಕಿತ್ತಳೆ ಹಣ್ಣಿನ ರುಚಿಗೆ ಎಲ್ಲರೂ ‘ಫಿಧಾ’ ಆಗಿದ್ದರು. ಕಿತ್ತಳೆ ಹಣ್ಣಿಗೆ ದೊಡ್ಡಮಟ್ಟದ ಬೇಡಿಕೆ ಕೂಡ ಸೃಷ್ಟಿಯಾಗಿತ್ತು.
ಆದರೆ ಇತ್ತೀಚಿನ ಐದಾರು ವರ್ಷಗಳಲ್ಲಿ ಕಿತ್ತಳೆ ನಾಡಿನಲ್ಲಿ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿದರೆ, ಕಿತ್ತಳೆ ಹಣ್ಣು ಬೆಳೆಯುವವರೇ ಇಲ್ಲ ಎಂಬ ಪರಿಸ್ಥಿತಿಗೆ ಕಿತ್ತಳೆ ನಾಡು ತಲುಪಿಬಿಟ್ಟಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಬೆಳೆಗಾರರು ಕಾಫಿ ತೋಟದಲ್ಲಿ ಕಿತ್ತಳೆ ಗಿಡಗಳನ್ನು ಬೆಳೆದು, ಕಾಫಿ ಹಾಗೂ ಕರಿಮೆಣಸಿನೊಂದಿಗೆ ಕಿತ್ತಳೆ ಹಣ್ಣಿನಲ್ಲಿ ಕೂಡ ಲಾಭಗಳಿಸುತ್ತಿದ್ದರು.
ಇದೀಗ ಬಹುತೇಕ ಕಾಫಿ ತೋಟಗಳಲ್ಲಿ ಕಿತ್ತಳೆ ಹಣ್ಣಿನ ಗಿಡಗಳನ್ನು ಹುಡುಕುವಂತಹ ಸ್ಥಿತಿಗೆ ತಲುಪಿಬಿಟ್ಟಿದೆ.
ಕಿತ್ತಳೆ ಹಣ್ಣಿಗೆ ಹಳದಿ ರೋಗ! ಕಿತ್ತಳೆ ಬೆಳೆಯಲು ಹಿಂದೇಟು!
ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಬೆಳೆಗಳಿಗೆ ಒಂದಲ್ಲಾ ಒಂದು ರೋಗ ತಗುಲಿ, ರೈತರು ಹಾಗೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದರ ಮಧ್ಯೆ ಕಿತ್ತಳೆ ಗಿಡಗಳಿಗೆ ಹಳದಿ ರೋಗ ತಗುಲಿ, ಕಿತ್ತಳೆ ನಶಿಸಿಹೋಗುತ್ತಿದೆ. ಈ ಕಾರಣದಿಂದಲೇ ಜಿಲ್ಲೆಯ ಬೆಳಗಾರರು ಕಿತ್ತಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಅದಲ್ಲದೇ ಕಾಫಿ ಹಾಗೂ ಕರಿಮೆಣಸು ಬೆಳೆಯ ಮಧ್ಯೆ ಕಿತ್ತಳೆ ಗಿಡಗಳಿಗೆ ಭಾದಿಸಿರುವ ಹಳದಿ ರೋಗಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ ಎಂದು ಹೇಳಿ, ಕಿತ್ತಳೆ ಗಿಡಗಳನ್ನು ಬುಡಸಮೇತ ತೋಟಗಳಿಂದ ಕಿತ್ತುಹಾಕಿದ್ದಾರೆ.
ತೋಟದ ನಿರ್ವಹಣೆಗೆ ಹರಸಾಹಸಪಡುತ್ತಿರುವ ಬೆಳೆಗಾರರು, ವರ್ಷ ಕಳೆದಂತೆ ಕಿತ್ತಳೆ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ.
ಕಿತ್ತಳೆ ಗಿಡಗಳಿಗೆ ತಗುಲಿರುವ ಹಳದಿ ರೋಗವನ್ನು ನಿಯಂತ್ರಿಸಲು ಬೆಳೆಗಾರರು ಕೂಡ ಆಸಕ್ತಿ ತೋರುತ್ತಿಲ್ಲ. ಕಾಫಿ ಹಾಗೂ ಕರಿಮೆಣಸು ಮುಖ್ಯ ಬೆಳೆಯಾಗಿರುವುದರಿಂದ ಬಹುತೇಕರು ಕಿತ್ತಳೆ ಹಣ್ಣಿನ ಬೆಳೆಯನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಒಂದು ಕಿತ್ತಳೆ ಗಿಡಕ್ಕೆ ಹಳದಿ ರೋಗ ತಗುಲಿದರೆ, ಮತ್ತೊಂದು ಗಿಡಕ್ಕೆ ವೇಗವಾಗಿ ರೋಗ ಹರಡುತ್ತದೆ. ಹೊಸದಾಗಿ ತೋಟದಲ್ಲಿ ಕಿತ್ತಳೆ ಗಿಡ ನೆಟ್ಟರೂ ಸಹಾ, ಆ ಗಿಡಗಳಿಗೂ ಸಹ ರೋಗ ಭಾದಿಸುತ್ತದೆ. ಮೈಕ್ರೋಯೂನಿಟಿಯನ್ ದಿನದಿತ್ಯ ಹಳದಿ ರೋಗಗಳು ಬಾರದಂತೆ ಕಿತ್ತಳೆ ಗಿಡಗಳಿಗೆ ಸಿಂಪಡಿಸಿ ರೋಗ ನಿಯಂತ್ರಿಸಬೇಕು.
ಆದರೆ ಕಿತ್ತಳೆ ಬೆಳೆಯ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಬೆಳೆಗಾರರನ್ನು ಕಿತ್ತಳೆಗೆ ತಗುಲಿಕೊಂಡಿರುವ ರೋಗಗಳ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ ತೋರಿರುವುದರಿಂದ ತೋಟಗಳಲ್ಲಿ ಕಿತ್ತಳೆ ಗಿಡಗಳು ಒಣಗಿ ನಶಿಸಿಹೋಗುತ್ತಿದೆ.
ಕೊಡಗಿನ ಕಿತ್ತಳೆ ಹೆಸರಿನಲ್ಲಿ ನಾಗ್ಪುರದ ಕಿತ್ತಳೆ ಮಾರಾಟ!..
ಕಿತ್ತಳೆಯ ತವರೂರಿನಲ್ಲೇ ಕೊಡಗಿನ ಕಿತ್ತಳೆ ಹಣ್ಣು ದೊರಕುತ್ತಿಲ್ಲ. ಜಿಲ್ಲೆಯ ಸುಂಟಿಕೊಪ್ಪ -ಕುಶಾಲನಗರ ಮಾರ್ಗ ಹಾಗೂ ಮಡಿಕೇರಿ-ಮಂಗಳೂರು ಮಾರ್ಗದ ಮುಖ್ಯ ರಸ್ತೆಯ ಬೀದಿ ಬದಿಯಲ್ಲಿ ವಿವಿಧ ಹಣ್ಣುಗಳನ್ನು ವ್ಯಾಪಾರ ಮಾಡುವುದು ಸಾಮಾನ್ಯವಾಗಿದೆ.
ಆದರೆ ಕೊಡಗಿನ ಕಿತ್ತಳೆ ಹಣ್ಣು ಎಂದು ಹೇಳಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನಾಗ್ಪುರದ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೊಡಗಿನ ಕಿತ್ತಳೆ ಹಣ್ಣಿಗೆ ಪ್ರತ್ಯೇಕ ರುಚಿ ಹಾಗೂ ಭಾರೀ ಬೇಡಿಕೆಯಿದೆ. ಕೊಡಗಿನ ಕಿತ್ತಳೆ ಎಂದಾಕ್ಷಣ ಪ್ರವಾಸಿಗರು ಖರೀದಿಸುತ್ತಾರೆ. ಆದರೆ ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವುದು ನಾಗ್ಪುರದ ಕಿತ್ತಳೆಯಾಗಿದೆ. ಕೊಡಗಿನ ಕಿತ್ತಳೆ ಹಣ್ಣು ೧೦೦ ರಿಂದ ೧೫೦ ರೂ.ವರೆಗೆ ಒಂದು ಕೆ.ಜಿಗೆ ಮಾರಾಟವಾಗುತ್ತಿತ್ತು. ೨೫ ರಿಂದ ೩೦ ರೂ. ನೀಡಿ ವ್ಯಾಪಾರಸ್ಥರು ನಾಗ್ಪುರದ ಕಿತ್ತಳೆ ಹಣ್ಣುಗಳನ್ನು ಕಿತ್ತಳೆ ನಾಡಿನಲ್ಲಿ ಕೊಡಗಿನ ಕಿತ್ತಳೆ ಎಂದು ೧೫೦ ರಿಂದ ೨೦೦ ರೂವರೆಗೆ (ಒಂದು ಕೆ.ಜಿ.ಗೆ) ಮಾರಾಟ ಮಾಡುತ್ತಿದ್ದಾರೆ.
ಬೆಳೆಯುವವರೂ ಇಲ್ಲ ! ವ್ಯಾಪಾರಿಗಳು ಇಲ್ಲ!...
ಕೊಡಗು ಜಿಲ್ಲೆಯ ಕಿತ್ತಳೆ ಹಣ್ಣಿಗೆ ಇಂದಿಗೂ ಕೂಡ ಭಾರೀ ಬೇಡಿಕೆ ಇದೆ. ಆದರೆ ಕಿತ್ತಳೆ ಬೆಳೆಯುವವರು ಇಲ್ಲದಂತಾಗಿದೆ. ಕೊಡಗಿನ ಕಿತ್ತಳೆ ವಿನಾಶದಂಚಿನತ್ತ ಸಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಕಾಫಿ ತೋಟಗಳಲ್ಲಿ ಬೆಳೆದಿರುವ ಕಿತ್ತಳೆ ಹಣ್ಣುಗಳನ್ನು ಕೊಂಡುಕೊಳ್ಳಲು ಕೇರಳ, ತಮಿಳುನಾಡು ರಾಜ್ಯದಿಂದಲೂ ಕೂಡ ವ್ಯಾಪಾರಿಗಳು ಜಿಲ್ಲೆಗೆ ಬರುತ್ತಿದ್ದರು.
ಗಿಡವೊಂದರಲ್ಲಿ ೮೦೦ ರಿಂದ ೧೦೦೦ ವರೆಗೆ ಹಣ್ಣು ಸಿಗುತ್ತಿದ್ದ ಕಿತ್ತಳೆ ಗಿಡದಲ್ಲಿ ಇದೀಗ ಒಂದೇ ಒಂದು ಹಣ್ಣು ಗಿಡದಲ್ಲಿ ಸಿಕ್ಕರೆ ಸಾಕು ಎಂದು ಹೇಳುತ್ತಾರೆ ಬೆಳೆಗಾರರು. ಗಿಡದಲ್ಲಿ ಒಂದಷ್ಟು ಹಣ್ಣುಗಳು ಕಾಣಿಸಿಕೊಂಡರು ಸಹಾ ಫಂಗಸ್ ರೋಗ ತಗುಲಿ ಕೊಯ್ಲು ಮಾಡುವ ವೇಳೆಯಲ್ಲಿ ಹವಾಮಾನ ವೈಪರೀತ್ಯಗಳಿಂದ ಹಣ್ಣಾಗಿರುವ ಕಿತ್ತಳೆ ನೆಲಕ್ಕುರುಳಿರುತ್ತದೆ.
ಡಿಸೆಂಬರ್ ತಿಂಗಳಿನಿAದ ಏಪ್ರಿಲ್ ತಿಂಗಳವರೆಗೆ ದೊರಕುವ ಕಿತ್ತಳೆ ಹಣ್ಣಿಗೆ ಬೇಡಿಕೆಯಿದ್ದು, ಈ ಸಮಯದಲ್ಲಿ ಬರುವ ಫಸಲು ರುಚಿಕರವಾಗಿರುತ್ತದೆ. ಮಳೆಗಾಲದಲ್ಲಿ ಉತ್ತಮ ಫಸಲು ಬರುತ್ತದೆ. ಆದರೆ ಬೇಡಿಕೆ ಕಡಿಮೆ ಇದ್ದು, ರುಚಿ ಕೂಡ ಕಡಿಮೆ ಇರಲಿದೆ.
ಬೆಳೆÀಗಾರರ ಕೈ ಹಿಡಿಯುತ್ತಿದ್ದ ಕೊಡಗಿನ ಕಿತ್ತಳೆ ಹಣ್ಣು ಅಳಿವಿನಂಚಿನಲ್ಲಿದ್ದು, ಕೊಡಗಿನ ಕಿತ್ತಳೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಹಾಗೂ ತೋಟಗಾರಿಕಾ ಇಲಾಖೆ ಬೆಳೆಗಾರರಿಗೆ ಆಸಕ್ತಿ ಮೂಡಿಸಬೇಕಾಗಿದೆ.
ಪುನಶ್ಚೇತನಗೊಳಿಸಲು ಪ್ರಯತ್ನ!
ಅಳಿವಿನಂಚಿನಲ್ಲಿರುವ ಕೊಡಗಿನ ಕಿತ್ತಳೆಯನ್ನು ಪುನಶ್ಚೇತನಗೊಳಿಸಲು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಸಹಕಾರದೊಂದಿಗೆ ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಇಲಾಖೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಐದು ಲಕ್ಷ ಕಿತ್ತಳೆ ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡಿ, ಕಿತ್ತಳೆ ಬೆಳೆಯ ಬಗ್ಗೆ ಬೆಳೆಗಾರರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೇಂದ್ರೀಯ ತೋಟಗಾರಿಕಾ ಇಲಾಖೆ ಮುಂದಾಗಿದೆ.
ಅದಲ್ಲದೇ ಕಿತ್ತಳೆ ಬೆಳೆಯಿಂದಾಗುವ ಲಾಭದಾಯಕ ವಿಷಯಗಳು, ಕಿತ್ತಳೆ ಗಿಡಗಳಿಗೆ ಬಾಧಿಸುವ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಕೂಡ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆ ವತಿಯಿಂದ ಕಿತ್ತಳೆ ಬೆಳೆಗಾರರಿಗೆ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.