ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ
ಮಡಿಕೇರಿ, ಮಾ. ೨೮ : ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಲೇ ಬರುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ.೪ ರಷ್ಟು ಮೀಸಲಾತಿಯನ್ನು ರದ್ದು ಮಾಡುವ ಮೂಲಕ ದೊಡ್ಡ ಅನ್ಯಾಯವನ್ನು ಮಾಡಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಕಲೀಲ್ ಬಾಷ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಲ್ಲಾ ಸಮುದಾಯದವರಿಗೂ ಮೀಸಲಾತಿಯನ್ನು ನೀಡಲಿ, ನಮ್ಮ ಆಕ್ಷೇಪಣೆ ಇಲ್ಲ. ಆದರೆ ಸಂವಿಧಾನಾತ್ಮಕವಾಗಿ ಮುಸಲ್ಮಾನರಿಗಾಗಿ ಮೀಸಲಿಟ್ಟ ಮೀಸಲಾತಿಯನ್ನು ಕಸಿದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮುಸಲ್ಮಾನರ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಯಾವ ಸಮುದಾಯದವರೂ ಕೇಳಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜಾಣತನವನ್ನು ಪ್ರದರ್ಶಿಸಲು ಮುಂದಾಗಿದೆ. ಪ್ರೀತಿ, ವಿಶ್ವಾಸ, ಸೌಹಾರ್ದತೆಗೆ ಹೆಸರಾಗಿರುವ ಕರ್ನಾಟಕದಲ್ಲಿ ದ್ವೇಷದ ವಿಷಬೀಜ ಬಿತ್ತಲಾಗುತ್ತಿದೆ. ಮುಸಲ್ಮಾನರನ್ನು ಗುರಿ ಮಾಡಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.