ಸೋಮವಾರಪೇಟೆ, ಮಾ. ೨೬: ಲಯನ್ಸ್ ೩೧೭ ಜಿಲ್ಲಾ ಘಟಕದಿಂದ ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಆಸ್ಪತ್ರೆಗಳಿಗೆ ಒಟ್ಟು ೧೧ ಡಯಾಲಿಸಿಸ್ ಯಂತ್ರಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಲಯನ್ಸ್ ಸಂಸ್ಥೆಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಲಯನ್ಸ್ ಸಂಸ್ಥೆ ಇಂದು ಪ್ರಮುಖ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ೨೨೦ ದೇಶಗಳಲ್ಲಿ ೧೦೫ ವರ್ಷಗಳಿಂದ ಸೇವೆ ಮಾಡುತ್ತಿದೆ ಎಂದರು.

ಸಂಸ್ಥೆಯು ಯಾರೊಬ್ಬರ ಜಾತಿ, ಧರ್ಮ ಪರಿಗಣಿಸದೆ, ಕೇವಲ ಮನುಕುಲದ ಸೇವೆಯನ್ನು ಮಾತ್ರ ಮಾಡಿಕೊಂಡು ಬರುತ್ತಿದೆ. ವಿಶ್ವದಾದ್ಯಂತ ೧೫ ಲಕ್ಷಕ್ಕೂ ಅಧಿಕ ಲಯನ್ಸ್ ಸಂಸ್ಥೆಯ ಸದಸ್ಯರು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಲಯನ್ಸ್ ಜಿಲ್ಲೆಯಲ್ಲಿ ೪೪ ಕ್ಲಬ್‌ಗಳಿದ್ದು, ಈ ಸಾಲಿನಲ್ಲಿ ಹೊಸದಾಗಿ ೧೪ ಕ್ಲಬ್‌ಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ೭ ಲಿಯೋ ಕ್ಲಬ್ ಗಳು ಸೇರಿವೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಲಯನ್ಸ್ ಜಿಲ್ಲಾ ವ್ಯಾಪ್ತಿಯಲ್ಲಿ ಕಿಡ್ನಿ ತೊಂದರೆಗೊಳಗಾದ ರೋಗಿಗಳಿಗಾಗಿ ಹುಣಸೂರು, ಕುಶಾಲನಗರ, ಗುಂಡ್ಲುಪೇಟೆ ಮತ್ತು ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ೧೧ ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಕೆ. ರೋಹಿತ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಪ್ರಗತಿ ಶೆಟ್ಟಿ, ಕೆ.ಎನ್. ತೇಜಸ್ವಿ, ಸುಮನ್ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ನಗರೂರು ಗ್ರಾಮದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಮತ್ತು ನಾಮಫಲಕವನ್ನು ಸಂಜೀತ್ ಶೆಟ್ಟಿ ಉದ್ಘಾಟಿಸಿದರು. ನಂತರದ ಕಾರ್ಯಕ್ರಮದಲ್ಲಿ ಈರ್ವರು ದಿವ್ಯಾಂಗರಿಗೆ ಗಾಲಿ ಕುರ್ಚಿ, ಕ್ಲರ‍್ಸ್ಗಳನ್ನು ವಿತರಿಸಲಾಯಿತು. ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಎಂ.ಎ. ಹರೀಶ್, ಪ್ರಾಂತೀಯ ಪ್ರತಿನಿಧಿ ಮಂಜುನಾಥ್ ಚೌಟ ಸೇರಿದಂತೆ ಇತರರು ಉಪಸ್ಥಿತರಿದ್ದರು.