ಸಿದ್ದಾಪುರ, ಮಾ. ೨೬: ನೆಲ್ಲಿಹುದಿಕೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸತ್ಯನಾರಾಯಣ ದೇವಾಲ ಯದ ವಾರ್ಷಿಕೋತ್ಸವದ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಗಣಪತಿ ಹೋಮದೊಂದಿಗೆ ಪ್ರಾರಂಭವಾದ ಉತ್ಸವದಲ್ಲಿ ಶ್ರೀ ಸತ್ಯನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ, ಮಹಾ ಪೂಜೆ, ದೇವತಾ ಪ್ರಾರ್ಥನೆ, ದೇವರ ಬಲಿ ಬರುವುದು ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.
ಇದಲ್ಲದೇ ಹಾಸನ ಮಹಾ ಸಂಸ್ಥಾನ ಮಠದ ಗುರುಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಕಲಶ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಸ್ವಾಗತಿಸಲಾಯಿತು. ನಂತರ ದೇವಾಲಯದ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿದ ಪ್ರವೇಶ ಮೆಟ್ಟಿಲಿನ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಶ್ರೀ ಸತ್ಯನಾರಾಯಣ ದೇವಾಲಯದ ಅಧ್ಯಕ್ಷ ಟಿ.ಜಿ. ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ೪ ದಿನಗಳ ಕಾಲ ನಡೆದ ಉತ್ಸವದ ಸಂದರ್ಭದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದರು.