ಕುಶಾಲನಗರ, ಮಾ. ೨೬: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ನಡುವೆ ಕೊಡಗು-ಮೈಸೂರು ಗಡಿ ಭಾಗದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮುನ್ನೆಚ್ಚರಿಕೆಯಾಗಿ ವಾಹನಗಳ ತಪಾಸಣಾ ಕಾರ್ಯಚರಣೆ ಪ್ರಾರಂಭಿಸಿದ್ದಾರೆ.
ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಭಾನುವಾರ ಬೆಳಗ್ಗಿನಿಂದ ಕುಶಾಲನಗರ ಪೊಲೀಸರು ಮೈಸೂರು ಜಿಲ್ಲೆಯಿಂದ ಕೊಡಗು ಜಿಲ್ಲೆ ಕಡೆಗೆ ಆಗಮಿಸುವ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನಿರ್ದೇಶನದಂತೆ ಪ್ರತಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ಅಕ್ರಮವಾಗಿ ಭಾರಿ ಮೊತ್ತದ ಹಣ ಸಾಗಾಟ, ಸೇರಿದಂತೆ ಚುನಾವಣಾ ಸಾಮಗ್ರಿಗಳು ಸಾಗಿಸುವ ನಿಟ್ಟಿನಲ್ಲಿ ಈ ಕಾರ್ಯ ಆರಂಭಗೊAಡಿದೆ.
ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ಅವರು ಕುಶಾಲನಗರದ ಗಡಿಭಾಗದ ತಪಾಸಣಾ ಕೇಂದ್ರಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡಗು ಜಿಲ್ಲೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳ ತಪಾಸಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಈಗಾಗಲೇ ಆರಂಭಿಸಿದೆ. ಗಡಿಭಾಗದಲ್ಲಿ ತಪಾಸಣಾ ಕೇಂದ್ರದ ಕಟ್ಟಡ ಒಂದನ್ನು ಕೂಡ ನಿರ್ಮಾಣ ಮಾಡಿದೆ.
ಮಾಲ್ದಾರೆ
ಸಿದ್ದಾಪುರ: ಪೊಲೀಸ್ ಇಲಾಖೆ ಕೊಡಗಿನ ಗಡಿಯಾದ ಮಾಲ್ದಾರೆ ಚೆಕ್ ಪೋಸ್ಟ್ನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಜಿಲ್ಲೆಯೊಳಗೆ ಅಕ್ರಮವಾಗಿ ಸಾಗಣೆಯಾಗುವ ಹಣ, ಮದ್ಯ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಡೆಯುವ ಉದ್ದೇಶದಿಂದ ಎಲ್ಲಾ ವಾಹನಗಳನ್ನೂ ತಪಾಸಣೆ ನಡೆಸಲಾಗುತ್ತಿದೆ ಹಾಗೂ ಹೆಚ್ಚಿನ ನಿಗಾ ಇರಿಸಿದ್ದಾರೆ.
ಸಿದ್ದಾಪುರ ಠಾಣಾಧಿಕಾರಿ ದಿಲೀಪ್ ಕುಮಾರ್, ಲಕ್ಷಿö್ಮಕಾಂತ್, ರತನ್, ಬಸವರಾಜ್, ಚೌಹಾನ್ ಹಾಜರಿದ್ದರು.