ಸೋಮವಾರಪೇಟೆ, ಮಾ. ೨೬: ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಏಣಿ ಜಾರಿದ ಪರಿಣಾಮ ಮರದಿಂದ ಕೆಳಬಿದ್ದು ಕಾರ್ಮಿಕ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ಕುಂಬೂರು ಗ್ರಾಮದಲ್ಲಿ ನಡೆದಿದೆ.

ಆಡಿನಾಡೂರು ಹಾಡಿ ನಿವಾಸಿ ಜೇನುಕುರುಬರ ಕುಮಾರ (೪೫) ಎಂಬವರೇ ಮೃತರು. ಕುಂಬೂರು ಗ್ರಾಮದ ಎಸ್.ಟಿ. ವಿಜಯ ತಾಕೇರಿ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲು ಕೆಲಸ ಮಾಡುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಕಳೆದ ೮ ದಿನಗಳಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕುಮಾರ ಅವರು ಇಂದು ಎಂದಿನAತೆ ಕರಿಮೆಣಸು ಕುಯ್ಯಲೆಂದು ತೆರಳಿದ್ದರು. ೨೦ ಅಡಿ ಎತ್ತರದ ಏಣಿಯಲ್ಲಿ ೭ ಅಡಿ ಎತ್ತರಕ್ಕೇರಿ ಕೊಯ್ಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಮಾದಾಪುರ ಪೊಲೀಸ್ ಉಪ ಠಾಣೆಯ ಎಎಸ್‌ಐ ಪೊನ್ನಪ್ಪ, ಮುಖ್ಯಪೇದೆ ವೀಣಾ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಕುಮಾರ ಅವರ ಪತ್ನಿ ಪ್ರೇಮಾ ಅವರು ಕಳೆದ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ೧೪ ಮತ್ತು ೮ ವರ್ಷದ ಈರ್ವರು ಪುತ್ರಿಯರಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೋಮವಾರಪೇಟೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.