ಕುಶಾಲನಗರ, ಮಾ. ೨೬: ಕುಶಾಲನಗರ ಪುರಸಭೆಯ ೨೦೨೩-೨೪ನೇ ಸಾಲಿನ ಬಜೆಟ್ ಮಂಡನೆ ಶುಕ್ರವಾರ ನಡೆಯಿತು.
ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಬಿ.ಜೈವರ್ಧನ್ ತಮ್ಮ ಅಧ್ಯಕ್ಷಾವಧಿಯಲ್ಲಿ ಮೂರನೇ ಬಾರಿಗೆ ರೂ. ೨೫ ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಿದರು.
೨೦೨೩-೨೪ನೇ ಸಾಲಿನ ನಿರೀಕ್ಷಿತ ಆದಾಯ ರೂ. ೨೨,೩೧,೦೬,೯೨೮, ನಿರೀಕ್ಷಿತ ಖರ್ಚು ೨೨, ೦೫, ೫೦,೦೦೦ ಕಳೆದು ೨೫,೫೬,೯೨೮ ರೂ.ಗಳ ಉಳಿತಾಯ ಬಜೆಟ್ ಮಂಡಿಸಿ, ಆಡಳಿತ ಮಂಡಳಿ ಅನುಮೋದನೆ ಕೋರಿದರು.
ತುರಾತುರಿಯಲ್ಲಿ ಪುರಸಭೆಯ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿರುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬೆಂಬಲಿತ ಸದಸ್ಯರ ಗೊಂದಲದ ಚರ್ಚೆಗಳ ನಡುವೆ ಬಜೆಟ್‌ಗೆ ಅನುಮೋದನೆ ನೀಡಲಾಯಿತಾದರೂ ಕಾಂಗ್ರೆಸ್ ಸದಸ್ಯರು ಬಜೆಟ್ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಹಿಂದಿನ ಬಜೆಟ್ ನಲ್ಲಿ ಹಾಕಿಕೊಂಡ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಶಾಸಕರು, ಅಧಿಕಾರಿ, ಸಿಬ್ಬಂದಿ ವರ್ಗ, ಸಾರ್ವಜನಿಕರ ಸಹಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನ ಗೊಂಡಿವೆ. ಪುರಸಭೆ ರಚನೆಯಾದ ಬಳಿಕ ಹೆಚ್ಚುವರಿ ವ್ಯಾಪ್ತಿಗೆ ಅಗತ್ಯ ಮೂಲಭೂತ ಸೌಕರ್ಯಗಳು ವೈಜ್ಞಾನಿಕವಾಗಿ ಇನ್ನಷ್ಟೇ ನಡೆಯಬೇಕಿದೆ ಎಂದರು. ಆದಾಯ, ಅನುದಾನ, ತೆರಿಗೆಗಳನ್ನು ಬಳಸಿಕೊಂಡು ಮೂಲಭೂತ ಸೌಲಭ್ಯ, ಅಭಿವೃದ್ಧಿ ಕಾಮಗಾರಿ ಗಳೊಂದಿಗೆ ಪುರಸಭೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಸೇರಿದಂತೆ ಪುರಸಭೆಯ ಕ್ರಿಯಾ ಯೋಜನೆಗಳಿಗೆ ಒತ್ತು ನೀಡಲಾಗಿದೆ ಎಂದರು.
ಆದಾಯ ದೃಷ್ಠಿಯಿಂದ ವಾಣಿಜ್ಯ ಸಂಕೀರ್ಣದ ಕೇವಲ ಮಳಿಗೆಗಳನ್ನು ಮಾತ್ರ ಉದ್ಘಾಟಿಸಲಾಗಿದ್ದು ಕಚೇರಿ ಉದ್ಘಾಟನೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಸಲಾಗುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುರಯ್ಯ ಬಾನು, ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಸದಸ್ಯರುಗಳು ಸೇರಿದಂತೆ ಅಭಿಯಂತರ ರಂಗರಾಮ್, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ಸಿಬ್ಬಂದಿಗಳಾದ ಶಕೀಲ್, ನಂಜುAಡ ಮತ್ತಿತರರು ಇದ್ದರು.