ಶಾಸಕ ಬೋಪಯ್ಯ

ವೀರಾಜಪೇಟೆ, ಮಾ. ೨೬: ಕಬಡ್ಡಿ ಪಂದ್ಯಾಟ ಗ್ರಾಮೀಣ ಭಾಗದ ಕ್ರೀಡೆಯಾಗಿದ್ದು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವಕಾಶ ದೊರಕುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಹೆಚ್.ಕೆ.ಪಿ.ಎಲ್ ಕಬಡ್ಡಿ ಸೇವಾ ಸಮಿತಿ ವತಿಯಿಂದ ಬೂದಿಮಾಳ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಕಬಡ್ಡಿ ಕ್ರೀಡೆಯ ಅಂತಿಮ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೋಪಯ್ಯ ಅವರು ಗ್ರಾಮೀಣ ಭಾಗದ ಯುವಕರು ಪ್ರತಿವರ್ಷ ಪಂದ್ಯಾಟವನ್ನು ಏರ್ಪಡಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ದಿನನಿತ್ಯ ಜಂಜಾಟದಲ್ಲಿರುವ ಮನುಷ್ಯನ ಒತ್ತಡವನ್ನು ದೂರಮಾಡಲು ಕ್ರೀಡೆಯು ಸಹಕಾರಿಯಾಗಿದ್ದು. ಗ್ರಾಮೀಣ ಭಾಗದ ಕ್ರೀಡೆಗಳನ್ನು ಯುವಕರು ಉಳಿಸಿ ಬೆಳೆಸುವಂತಾಗಬೇಕು ಎಂದರು.

ಈ ಭಾಗದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಹೆಗ್ಗಳ-ಬೂದಿಮಾಳ ಅತೀ ಹೆಚ್ಚು ಮಳೆ ಬೀಳುವ ಗ್ರಾಮ. ಈ ಹಿಂದೆ ಕುಗ್ರಾಮವಾಗಿದ್ದು, ಇಲ್ಲಿನ ಶಾಸಕರ ಪ್ರಯತ್ನದಿಂದ ಈ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯಗಳು ಸೇರಿದಂತೆ ಈ ಗ್ರಾಮ ಅಭಿವೃದ್ಧಿ ಹೊಂದಿರುವುದಾಗಿ ತಿಳಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ, ಸದಸ್ಯರಾದ ಎ. ಬೋಪಣ್ಣ, ಸುದೀಶ್, ರಂಜು, ಶಕ್ತಿ ಕೇಂದ್ರದ ಹೆಗ್ಗಳ ಗ್ರಾಮದ ಎ. ಹರೀಶ್, ಕೆದಮುಳ್ಳೂರಿನ ರತ್ನ ಅಯ್ಯಣ್ಣ, ಕಬಡ್ಡಿ ಆಯೋಜಕರಾದ ಅರುಣ್ ಪೂಜಾರಿ ಮತ್ತು ಸುಜೇಶ್ ಭರತ್ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ವೀರಾಜಪೇಟೆ ಮತ್ತು ಸಿದ್ದಾಪುರದಿಂದ ೧೦ ತಂಡಗಳು ಭಾಗವಹಿಸಿದ್ದವು.