ಚೆಟ್ಟಳ್ಳಿ, ಮಾ. ೨೬: ನೂರೋಕ್ಕ ನಾಡಿನ ೩೦೦ ವರ್ಷದ ಇತಿಹಾಸ ಹೊಂದಿರುವ ಈರಳೆ ಗ್ರಾಮದ ಶ್ರೀ ಪೊವ್ವೊದಿ (ಭಗವತಿ) ನೆಲೆಗೆ ವಿಶೇಷ ಶಕ್ತಿ ಇದೆ. ವಿವಾಹವಾಗದವರು ದೇವಿಯ ನೆಲೆಯಲ್ಲಿ ಬೇಡಿಕೊಂಡರೆ, ವಿವಾಹವಾಗಿ ಸಮೃದ್ದಿಯ ಜೀವನ ನಡೆಸುತ್ತಿರುವ ನಿದರ್ಶನಗಳಿವೆ.

ಪುರಾತನ ಕಾಲದಲ್ಲಿ ಮೂರು ಪೊವ್ವೊದಿ (ಭಗವತಿ) ದೇವಿಯರು ನೆಲೆಗಾಗಿ ಬಂದಾಗ ನೂರೋಕ್ಕ ನಾಡಿನ ತಪ್ಪಲಿನಿಂದ ಬಾಣಬಿಟ್ಟ ಜಾಗದಲ್ಲಿ ನೆಲೆಯಾಗುತ್ತಾರೆ. ಒಬ್ಬಳು ಚೇರಳ ಗ್ರಾಮದಲ್ಲೂ, ಮತ್ತೊಬ್ಬಳು ಈರಳೆ ಗ್ರಾಮದಲ್ಲೂ ಮೂರನೆಯವಳು ಶ್ರೀಮಂಗಲ ಗ್ರಾಮದಲ್ಲೂ ನೆಲೆಯಾಗುತ್ತಾಳೆ ಎಂಬ ಪ್ರತೀತಿ ಇದೆ.

ತನ್ನ ಈರ್ವರು ಸಹೋದರಿಯನ್ನು ನಿತ್ಯವೂ ನೋಡಲೆಂದು ಚೇರಳ ಭಗವತಿಯು ಪಶ್ಚಿಮಾಭಿಮುಖವಾಗಿ ನಿಂತಿರುವುದು ಮತ್ತೊಂದು ವಿಶೇಷ. ಈರಳೆ ಗ್ರಾಮದಲ್ಲಿ ನೆಲೆಯಾದ್ದರಿಂದ ಈರಳೆ ಪೊವ್ವೊದಿ ಎಂದು ಕರೆಯುವ ದೇವರ ನೆಲೆಯಲ್ಲಿ ಪುರಾತನ ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆದಿದೆ. ಹಿಂದಿನ ಸಂಪ್ರದಾಯದAತೆ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಇದೇ ತಾ. ೨೩ ರಂದು ರಾತ್ರಿ ೮ಕ್ಕೆ ಊರಿನ ದೇವತಕ್ಕ, ಊರುತಕ್ಕ ಹಾಗೂ ಊರಿನವರೆಲ್ಲ ಸೇರಿ ದುಡಿಕೊಟ್ ಹಾಡಿನೊಂದಿಗೆ ದೇವರ ಜ್ಯೋತಿಯನ್ನು ತೆಗೆದು ಬೊಳಕ್ ಮರದಲ್ಲಿಡುವ ಮೂಲಕ ಹಬ್ಬ ಕಟ್ಟು ಬಿದ್ದಿದೆ.

ತಾ. ೨೭ ರಂದು (ಇಂದು) ಮದ್ಯಾಹ್ನ ೩ ಗಂಟೆಗೆ ದೇವರ ಭಂಡಾರ ತರವುದು, ತಕ್ಕರ ಹಾಗೂ ದೇವರ ಭಂಡಾರ ಮನೆಯಾದ ಪೊರಿಮಂಡ ಕುಟುಂಬದ ಮನೆಯಿಂದ ಹಾಗೂ ದೇವತಕ್ಕರಾದ ಬಲ್ಲಾರಂಡ ಐನ್‌ಮನೆಯಿಂದ ಪೊವ್ವೋದಿಯ ಎತ್ತು ಪೋರಾಟವನ್ನು ದೇವನೆಲೆಗೆ ತಂದು ಒಪ್ಪಿಸುವರು. ನಂತರ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಮೇದರ ಕೊಟ್ಟಿಗೆ ಪೀಲಿಯಾಟ್, ಬೊಳಕಾಟ್ ಹಾಗು ಕೈತಲೆ ಆಟ್ ನಡೆಯುವುದು. ಪೊವ್ವೊದಿಯ ವಾರ್ಷಿಕ ಉತ್ಸವವು ನಡೆಯಲಿದೆ. ಭಕ್ತಾದಿಗಳು ಹರಕೆ ಭಂಡಾರವನ್ನು ಅರ್ಪಿಸಲಿದ್ದಾರೆ.

ಊರಿನವರು ರಾತ್ರಿ ಪರದೇವರ ದೇವನೆಲೆಯಲ್ಲಿ ಸಂಪ್ರದಾಯದAತೆ ಪೂಜೆ ಸಲ್ಲಿಸಿ ತಾ. ೨೮ರ ಬೆಳಿಗ್ಗೆ ಪೂರ್ವಾಹ್ನ ೧೦ ಗಂಟೆಗೆ ಪರ ದೇವರ ಕೋಲವಿದ್ದು ತ್ರಿಶಕ್ತಿ ದೇವತೆಯನ್ನು ಪೂಜಿಸುವ ಕ್ರಮವಿದೆ. ಪೊವ್ವೋದಿ ಹಾಗೂ ಭದ್ರಕಾಳಿಯ ಉತ್ಸವದ ಪೂಜಾ ಸಂಪ್ರದಾಯಗಳೆಲ್ಲ ಆದನಂತರ ಮಹಾವಿಷ್ಣುವಿನ ಅವತಾರದ ಹೆಚ್ಚಿನ ಅಂಶವಿರುವ ಶಕ್ತಿ ದೇವತೆಯ ಶ್ರೀಅಂಶವಿರುವ ದಟ್ಟಕಾನನದ ದೇವರ ಕಾಡಿನಲ್ಲಿ ನೆಲೆಗೊಂಡಿರುವ ಆಯಿರ ಪರದೇವತೆಯನ್ನು ತೆರೆಯ (ಕೋಲದ) ಮೂಲಕ ಪೂಜಿಸುವ ಸಂಪ್ರದಾಯ ಹಿಂದಿನಿAದಲೂ ನಡೆಯಲಿದೆ.

ಆಚರಣೆ ಬಳಿಕ ಬೆಳಿಗ್ಗೆ ಶೃಂಗರಿಸಿದ ಪರದೇವ ಕೋಲವನ್ನು ಚಂಡೆವಾದ್ಯದೊAದಿಗೆ ಪೊವ್ವೊದಿಯ ದೇವನೆಲೆಗೆ ಬಂದು ದೇವಾಲಯಕ್ಕೆ ಮೂರು ಪ್ರದಕ್ಷಿಣೆ ಹಾಕಿ ದೇವತಕ್ಕ, ಊರುತಕ್ಕರಿಗೆ ಹಾಗೂ ಭಕ್ತಾದಿಗಳಿಗೆಲ್ಲ ಆಶೀರ್ವದಿಸಿ ತೆರಳಿ ದೇವನೆಲೆಯಲ್ಲಿ ಕೋಲವನ್ನು ಕಳಚಿ ಮೊಗವನ್ನು ಹೊತ್ತು ಚಂಡೆ ವಾದ್ಯಗಳೊಂದಿಗೆ ದಟ್ಟಕಾನನ ನಡುವಿನ ಪರದೇವ ನೆಲೆಗೆ ತೆರಳಿ ಸಂಪ್ರದಾಯ ಬದ್ದವಾಗಿ ಪೂಜೆ ಸಲ್ಲಿಸುವುದರ ಮೂಲಕ ಆಚರಣೆ ಕೊನೆಗೊಳ್ಳಲಿದೆ.

-ಪುತ್ತರಿರ ಕರುಣ್ ಕಾಳಯ್ಯ