ಸಂಪ್ರದಾಯ, ನೀತಿ-ನೇಮಗಳು ಜಾರಿಯಲ್ಲಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಮಳೆರಾಯನೆಂದೇ ಖ್ಯಾತಿವೆತ್ತು, ಅಪ್ಪನ ಸ್ಥಾನದಲ್ಲಿ ನೆಲೆನಿಂತಿರುವ ಇಗ್ಗುತಪ್ಪ ದೇವರು. ನಾಡು ಹಚ್ಚ ಹಸಿರಾಗಿ ಕಂಗೊಳಿಸಲಿ, ನಾಡಿನ ಜನತೆ ಸುಖಮಯ ಬದುಕನ್ನು ಸಾಗಿಸಲಿ ಎಂದು ಗುಪ್ತಗಾಮಿನಿಯಾಗಿ ಹರಿದು, ನಾಡಿನೆಲ್ಲೆಡೆ ತನ್ನ ಛಾಪನ್ನು ಮೂಡಿಸುತ್ತಾ, ಹೊಳೆಯಾಗಿ ಹರಿದು, ವಿಶ್ವ ವಿಖ್ಯಾತದೊಂದಿಗೆ, ಸಹಸ್ರಾರು ರೈತ ಕುಲಕ್ಕೆ ಸುಭಿಕ್ಷೆಯಿಂದ ಬಾಳಲಿ, ಯಾವುದೇ ಕಷ್ಟಗಳು ಬಾರದಿರಲಿ, ನಾನು ನಿಮ್ಮೊಂದಿಗಿದ್ದೇನೆ... ನನ್ನನ್ನು ನಂಬಿ... ನಂಬಿದವರಿಗೆ ಇಂಬುಕೊಟ್ಟು ಸಾಕಿ ಸಲಹುತ್ತೇನೆಂದು ಬಿಸಿಲು-ಮಳೆ-ಗಾಳಿಯನ್ನು ಲೆಕ್ಕಿಸದೇ ನೆಲೆನಿಂತು ಆಶೀರ್ವದಿಸುವ ಹಲವಾರು ನಾಡ ದೇವತೆಗಳು...!
ಹಿಂದಿನ ಕಾಲದಲ್ಲಿ ನಾಡು ಅಂದಾಗ ನೆಮ್ಮದಿಯ ಬದುಕಿಗೆ ತಕ್ಕುದಾದ ಭೂಮಿ - ತೋಟಗಳು. ಒಂದಾಗಿ ಬದುಕನ್ನು ಸವಿಯುವ ಕೂಡು ಕುಟುಂಬದ ಐನ್ಮನೆಗಳು. ಮನೆಗಳ ರಕ್ಷಣೆಯಲ್ಲಿ ಆರಾಧಿಸುವ ಅಂಜಿಕೂಟ್ ಮೂರ್ತಿಗಳು, ಮಣ್ಣು-ಮನೆ ಸ್ಥಾಪಿಸಿ ಹಿರಿಯರನ್ನು ಗೌರವಿಸಿ - ಪೂಜಿಸುವ ಕೈಮಡಗಳು... ಇವೆಲ್ಲಾದ್ದಕ್ಕೂ ಒಪ್ಪುವಂತಹ ಪದ್ಧತಿ - ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು... ನಾಡಿನಲ್ಲಿ ತನ್ನದೆಯಾದ ವಿಭಿನ್ನ ರೀತಿಯಲ್ಲಿ ಮುನ್ನಡಿಯಿಡುತ್ತಾ ಸಾಗುತ್ತಿರುವುದು ಸಾಮಾನ್ಯವಾಗಿದೆ.
ಇತ್ತ ಭತ್ತದ ಕೊಯ್ಲಿನ ಕೆಲಸ ಕಾರ್ಯಗಳು ಮುಗಿದಂತೆ, ಬಿರುಸಿನ ಕಾಫಿ, ಒಳ್ಳೆಮೆಣಸು ಕೊಯ್ಲು ಮುಕ್ತಾಯಗೊಂಡು, ಮಾರಾಟದ ಭರಾಟೆಯಲ್ಲಿರುವಾಗಲೇ ಗ್ರಾಮ ದೇವತೆಗಳ ವಾರ್ಷಿಕ ಹಬ್ಬ ಪ್ರಾರಂಭಗೊಳ್ಳುತ್ತದೆ. ಆಯಾಯಾ ದೇವಾಲಯಕ್ಕೆ ಸಂಬAಧಿಸಿದ ಕರ್ತವ್ಯನಿರತ ಕುಟುಂಬಸ್ಥರು ಒಂದೆಡೆ ಸೇರಿ ವಾರ್ಷಿಕ ಹಬ್ಬದ ಸಾಂಪ್ರದಾಯಿಕ ಆಚರಣೆಗೆ ಮುನ್ನುಡಿ ಬರೆಯುತ್ತಾರೆ. ಗ್ರಾಮ ದೇವತೆಗಳ ಆಚರಣೆಗೆಂದು ನಾಡತಕ್ಕರು, ದೇವತಕ್ಕರು, ಭಂಡಾರತಕ್ಕರು ಹಾಗೂ ದೇವಾಲಯ ಅಭಿವೃದ್ಧಿ ಸಮಿತಿಗಳು, ಗ್ರಾಮಸ್ಥರು ಒಂದೆಡೆ ಸೇರಿ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಾ, ಹಬ್ಬದ ಕಟ್ಟುಪಾಡುಗಳನ್ನು ಅನುಸರಿಸುವುದರ ಮೂಲಕ ಹಬ್ಬ ಆಚರಿಸುತ್ತಾರೆ.
ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಅಲ್ಲಲ್ಲಿ ನಾಡ ದೇವತೆಗಳ ಕೋಲಗಳನ್ನು ನಡೆಸುವುದನ್ನು ನೋಡಬಹುದು. ಈ ಎರಡು ತಿಂಗಳು ದೇವತಾ ಕಾರ್ಯಕ್ಕೆ ಮೀಸಲಾಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಇನ್ನುಳಿದ ತಿಂಗಳಲ್ಲಿ ರೈತಾಪಿ ವರ್ಗದವರು ಕಷ್ಟಪಟ್ಟು ಬೆವರು ಸುರಿಸಿ, ಮಣ್ಣಲ್ಲಿ ಮಣ್ಣಾಗಿ ಬೆರೆತು, ಕೃಷಿಯಲ್ಲಿ ಫಸಲನ್ನು ಗಳಿಸುವಲ್ಲಿ ಶಕ್ತರಾಗುತ್ತಾರೆ. ಬಳಿಕ ಒಂದಷ್ಟು ವಿಶ್ರಾಂತಿಯೊAದಿಗೆ, ನಾಡಿನ ಕಟ್ಟುಪಾಡುಗಳನ್ನು ಪಾಲಿಸುವ ದೇವತಾ ಕಾರ್ಯವನ್ನು ನಡೆಸುತ್ತಾರೆ.
ಹಿಂದಿನ ಕಾಲದಲ್ಲಿ ಗುರುಮಣ್ಣಿನಲ್ಲಿ ಹುಟ್ಟಿ ಬೆಳೆದಿರುವ ಹಿರಿಯ ತಲೆಮಾರಿನವರು ಅನುಸರಿಸಿ ಕೊಂಡು ಬರುತ್ತಿದ್ದ ಎಲ್ಲಾ ಸಂಪ್ರದಾಯ, ಕಟ್ಟುಪಾಡುಗಳಿಗೆ ತನ್ನದೇ ಆದ ಅರ್ಥವಿದೆ. ಸಮಾಜದಲ್ಲಿ ಗೌರವದ ಸ್ಥಾನಮಾನವಿದೆ. ಅದರ ಫಲವಾಗಿ ನಾಡಿನಲ್ಲಿ ಸಂತಸ, ನೆಮ್ಮದಿ, ಸುಖ-ಶಾಂತಿ, ಭಯ-ಭಕ್ತಿ, ಪ್ರೀತಿ-ವಿಶ್ವಾಸ, ಗೌರವ-ನಂಬಿಕೆ, ಆಸೆ-ಆಕಾಂಕ್ಷೆ, ಒಗ್ಗಟ್ಟು ತಾಂಡವವಾಡುತ್ತಿತ್ತು.
ಇಂದು ನಾಡಿನಲ್ಲಿ ಕಟ್ಟುಪಾಡುಗಳು ಇರಲಿ, ಅದನ್ನು ನಡೆಸಲು ನಾಗರಿಕರೇ ಇಲ್ಲದಾಗಿದೆ...! ಕಾರಣ ಇಂದಿನ ಮಕ್ಕಳಲ್ಲಿ ಅನೇಕರು ಹೊರ ಪ್ರಪಂಚ, ಹೊರ ಜ್ಞಾನ, ಹೊರ ಬದುಕಿನ ಜಂಜಾಟಕ್ಕೆ ದಾಸರಾಗಿದ್ದಾರೆಯೇ ವಿನಃ ನಾಡಿನ ನಾಡಿಮಿಡಿತದ ಬಗ್ಗೆ ಕಿಂಚಿತ್ತೂ ಅರಿವು, ಪರಿಜ್ಞಾನ, ತಿಳುವಳಿಕೆ ಮೂಡಿಸುವಲ್ಲಿ ಶಕ್ತರಾಗಿಲ್ಲ.
ಆದರೂ ಕೂಡ ನಾಡಿನಲ್ಲಿ ಹಿರಿಯರ ಮಧ್ಯೆ ಒಂದಷ್ಟು ತಿಳುವಳಿಕೆಯನ್ನು ಪಡೆದು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಆಸಕ್ತ ಕಿರಿಯರು ಅಲ್ಲಲ್ಲಿ ಸಂಸ್ಕೃತಿ-ಸAಪ್ರದಾಯಗಳನ್ನು ಪಾಲಿಸಿ ಕೊಂಡು ಬರುತ್ತಿರುವುದನ್ನು ಕಾಣಬಹುದು. ಇದರ ಫಲವಾಗಿ ದೇವತೆಗಳಿಗೊಂದಿಷ್ಟು ಪೂಜೆ-ಪುನಸ್ಕಾರ, ನಾಡಿನಲ್ಲಿ ಶಾಂತಿ-ನೆಮ್ಮದಿ ಕಾಣಲು ಸಾಧ್ಯವಾಗುತ್ತಿದೆ. ಅಕ್ಕಪಕ್ಕದ ಮನೆಯಲ್ಲಿ ಸಾವು-ನಲಿವುಗಳಿದ್ದಲ್ಲಿ ಜಾತಿ-ಮತ-ಧರ್ಮ-ಎನ್ನದೆ ನಮ್ಮದೇ ಮನೆ ಸದಸ್ಯರಂತೆ, ಒಂದಾಗಿ ಸೇರಿ ಕಾರ್ಯನಿರ್ವಹಿಸುತ್ತಾರೆ. ಹಿರಿಯರ ಮಾತನ್ನು ಕಿರಿಯರು ಪಾಲಿಸುವುದರ ಮೂಲಕ ಸಂಸಾರ-ಸಮಾಜದಲ್ಲಿ ಗೌರವಕ್ಕೆ - ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ ಎಂದರೂ ತಪ್ಪಾಗಲಾರದು.
(ಮುಂದುವರಿಯುವುದು)
- ಕೂಡಂಡ ಸಾಬ ಸುಬ್ರಮಣಿ,
ಹೊದ್ದೂರು. ಮೊ: ೯೮೪೫೫೭೧೨೯೦