ಒಳಮೀಸಲಾತಿ: ಯಡಿಯೂರಪ್ಪ ನಿವಾಸ ಮೇಲೆ ಕಲ್ಲು ತೂರಾಟ

ಶಿವಮೊಗ್ಗ, ಮಾ. ೨೭: ರಾಜ್ಯ ಬಿಜೆಪಿ ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ತೀವ್ರವಾಗಿದೆ. ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅವರ ನಿವಾಸಕ್ಕೆ ಅನೇಕ ಮಂದಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಲ್ಲದೆ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರ ಫ್ಲೆಕ್ಸ್ಗಳು, ಬ್ಯಾನರ್‌ಗಳನ್ನು ಹರಿದು ಹಾಕಿದರು. ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ೨ಬಿ ಮೀಸಲಾತಿಯನ್ನು ಮತ್ತೆ ತರುವಂತೆ ಒತ್ತಾಯಿಸಿ ಕೊಪ್ಪಳದಲ್ಲಿ ಇಂದು ಮುಸ್ಲಿಂ ಸಮುದಾಯದವರೂ ಪ್ರತಿಭಟನೆ ನಡೆಸಿದರು.

ಲಂಚ ಸ್ವೀಕಾರ ಪ್ರಕರಣ: ಕೊನೆಗೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ!

ಬೆAಗಳೂರು, ಮಾ. ೨೭: ಲಂಚ ಸ್ವೀಕಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೊನೆಗೂ ಪೊಲೀಸರು ಬಂದಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ ನಂತರ ಅವರನ್ನು ಬಂದಿಸಲಾಗಿದೆ. ಮಾಡಾಳ್ ವಿರೂಪಾಕ್ಷ ತನಿಖೆಗೆ ಸಹಕರಿಸುತ್ತಿಲ್ಲ, ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ನ್ಯಾಯಾಲ ಯದ ಮೊರೆ ಹೋಗಿತ್ತು. ಆರೋಪಿಯ ಜಾಮೀನು ಅರ್ಜಿಯನ್ನು ಕೋರ್ಟ್ ರದ್ದುಗೊಳಿಸಿತ್ತು. ಪರಿಣಾಮವಾಗಿ ಇದೀಗ ಅವರ ಬಂಧನ ವಾಗಿದೆ. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರ ದಾವಣಗೆರೆ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿತ್ತು. ಅಲ್ಲಿಯೂ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿತ್ತು. ನಂತರ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ದೊರೆತ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರಿಗೆ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಜೆಐಗೂ ಪತ್ರ ಬರೆಯಲಾಗಿತ್ತು.

ಅಪರಾಧಿಗಳಿಗೆ ಕ್ಷಮಾಪಣೆ; ಗುಜರಾತ್ ಸರ್ಕಾರಕ್ಕೆ ಸುಪ್ರೀಂ ತಾಕೀತು!

ನವದೆಹಲಿ, ಮಾ. ೨೭: ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿ ಕುರಿತು ಕೇಂದ್ರ, ಗುಜರಾತ್ ಸರ್ಕಾರ ಮತ್ತಿತರರಿಂದ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೇಳಿದೆ. ೨೦೨೨ರ ಗೋದ್ರಾ ಹತ್ಯಾಕಾಂಡದ ನಂತರ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ನಡೆದು ಆಕೆಯ ಏಳು ಮಂದಿ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ೧೧ ಮಂದಿಗೆ ಆರೋಪಗಳಿಂದ ಖುಲಾಸೆಗೊಳಿಸಿರುವುದನ್ನು ಬಾನೊ ಸುಪ್ರೀಂನಲ್ಲಿ ಪ್ರಶ್ನಿಸಿದ್ದಾರೆ. ಇದರಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು, ವಿವರವಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯನ್ನು ಏಪ್ರಿಲ್ ೧೮ಕ್ಕೆ ಮುಂದೂಡಿದೆ. ನ್ಯಾಯಾಲಯಗಳ ಮುಂದೆ ಅನೇಕ ಕೊಲೆ ಪ್ರಕರಣಗಳಿದ್ದು, ಅಪರಾಧಿಗಳು ಕ್ಷಮಾಪಣೆ ಇಲ್ಲದೆ ಅನೇಕ ವರ್ಷಗಳಿಂದ ಜೈಲುಗಳಲ್ಲಿಯೇ ಕೊಳೆಯುತ್ತಿದ್ದಾರೆ. ಇತರ ಪ್ರಕರಣಗಳಂತೆ ಇಲ್ಲಿಯೂ ಏಕರೂಪ ಮಾನದಂಡಗಳನ್ನು ಅನ್ವಯಿಸಲಾಗಿದೆಯೇ ಎಂದು ನ್ಯಾಯಮೂರ್ತಿ ಜೋಸೆಫ್ ಪ್ರಶ್ನಿಸಿದರು. ಅಪರಾಧ ಭಯಾನಕವಾಗಿದೆ ಎಂದು ಮೌಖಿಕವಾಗಿ ಸೂಚಿಸಿರುವ ನ್ಯಾಯಾಲಯ, ಸುಪ್ರೀಂ ಕೋರ್ಟ್ ಕೇಂದ್ರ, ಗುಜರಾತ್ ಸರ್ಕಾರ ಮತ್ತು ಅಪರಾಧಿಗಳಿಗೆ ನೋಟೀಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ದಿನದಂದು ಕಕ್ಷಿದಾರರ ಕ್ಷಮಾಧಾನಕ್ಕೆ ಸಂಬAಧಿತ ಕಡತಗಳೊಂದಿಗೆ ಸಿದ್ಧವಾಗುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕಳೆದ ವರ್ಷ ನವೆಂಬರ್ ೩೦ ರಂದು ಗುಜರಾತ್ ಸರ್ಕಾರ ೧೧ ಜೀವಾವಧಿ ಕೈದಿಗಳ ತಾತ್ಕಾಲಿಕ ಬಿಡುಗಡೆ ಪ್ರಶ್ನಿಸಿ ಬಾನೊ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿ ವಜಾಗೊಂಡಿತ್ತು. ಎಲ್ಲಾ ೧೧ ಅಪರಾಧಿಗಳಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿದ್ದರಿಂದ ಕಳೆದ ವರ್ಷ ಆಗಸ್ಟ್ ೧೫ ರಂದು ಎಲ್ಲ ಆರೋಪಿಗಳು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟ; ೬ ಮಂದಿ ಸಾವು

ಕಾಬುಲ್, ಮಾ. ೨೭: ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ವರದಿಯಾಗಿದ್ದು, ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟಿಸಿ ಕನಿಷ್ಟ ೬ ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಮಧ್ಯಾಹ್ನ ಆಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯದ ಕಚೇರಿ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಟ ೬ ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಾಫಿ ಟಾಕೋರ್ ಮಾಹಿತಿ ನೀಡಿದ್ದಾರೆ. ಸಚಿವಾಲಯದ ಬಳಿಯ ಭದ್ರತಾ ತಪಾಸಣಾ ಕೇಂದ್ರದಲ್ಲಿ ಆತ್ಮಹತ್ಯಾ ದಾಳಿಕೋರನನ್ನು ಗುರುತಿಸಲಾಗಿತ್ತು ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ. ಮಲಿಕ್ ಅಸ್ಗರ್ ಚೌಕದಲ್ಲಿ ಗುರಿಯನ್ನು ತಲುಪುವ ಮೊದಲು ಆತ್ಮಹತ್ಯಾ ದಾಳಿಕೋರನನ್ನು ಚೆಕ್ ಪಾಯಿಂಟ್‌ನಲ್ಲಿ ಗುರುತಿಸಲಾಯಿತು ಮತ್ತು ಗುಂಡಿಟ್ಟು ಕೊಲ್ಲಲಾಯಿತು, ಆದರೆ ಅವನು ಕೆಳಗೆ ಬೀಳುತ್ತಿದ್ದಂತೆಯೇ ಆತ ಧರಿಸಿದ್ದ ಸ್ಫೋಟಕಗಳು ಸ್ಫೋಟಗೊಂಡವು. ಇದರಿಂದ ದುರಂತ ಸಂಭವಿಸಿದೆ" ಎಂದು ಅವರು ಹೇಳಿದರು. ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ಹೊಂದಿರುವ ಭಾರೀ ಭದ್ರತೆ ಹೊಂದಿರುವ ಬೀದಿಯನ್ನು ಕಾವಲು ಮಾಡುವ ಚೆಕ್‌ಪಾಯಿಂಟ್‌ನ ಸಮೀಪವಿರುವ ಜನನಿಬಿಡ ಡೌನ್‌ಟೌನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ. ಮೂರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ವಿದೇಶಾಂಗ ಸಚಿವಾಲಯದ ಬಳಿ ನಡೆದ ೨ನೇ ದಾಳಿ ಇದಾಗಿದೆ. ಅಲ್ಲದೆ, ರಂಜಾನ್ ತಿಂಗಳ ಆರಂಭದಲ್ಲೇ ದಾಳಿ ನಡೆದಿದೆ. ಜನವರಿಯಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ ೧೦ ಮಂದಿ ಸಾವಿಗೀಡಾಗಿದ್ದರು. ೫೩ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.