ಮಡಿಕೇರಿ, ಮಾ. ೨೫: ಸದ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಆಯ್ಕೆಯಾಗಿದ್ದಾರೆ.

ಮಾಜಿ ವಿಪಕ್ಷ ನಾಯಕ, ಖ್ಯಾತ ವಕೀಲರಾಗಿದ್ದ ಎ.ಕೆ. ಸುಬ್ಬಯ್ಯ ಅವರ ಪುತ್ರರಾಗಿರುವ ಪೊನ್ನಣ್ಣ ರಾಜ್ಯ ಸರಕಾರದ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿದವರಾಗಿದ್ದಾರೆ.

ಕೆಪಿಸಿಸಿ ಇದೀಗ ರಾಜ್ಯದ ಒಟ್ಟು ೧೨೪ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದ್ದು, ಪೊನ್ನಣ್ಣ ಅವರಿಗೆ ವೀರಾಜಪೇಟೆ ಕ್ಷೇತ್ರದಿಂದ ಟಿಕೆಟ್ ಅಂತಿಮವಾಗಿದೆ.

ಕಳೆದ ಹಲವು ವರ್ಷದಿಂದ ಅವರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದು, ಕೆಪಿಸಿಸಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷರೂ ಆಗಿದ್ದಾರೆ. ವೀರಾಜಪೇಟೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿ ಪೊನ್ನಣ್ಣ ಹಾಗೂ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರುಗಳ ಹೆಸರು ಕೇಳಿಬಂದಿತ್ತು. ಇದೀಗ ಕೆಪಿಸಿಸಿ ಪೊನ್ನಣ್ಣ ಅವರಿಗೆ ಟಿಕೆಟ್ ನೀಡಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಪೊನ್ನಣ್ಣ ಅವರು ತಮ್ಮ ಜನಪರ ಕೆಲಸ ಹಾಗೂ ಪಕ್ಷ ಸಂಘಟನೆಯನ್ನು ಗುರುತಿಸಿ ಪಕ್ಷ ದೊಡ್ಡ ಅವಕಾಶವನ್ನು ನೀಡಿದೆ. ಜನತೆಯೂ ತಮ್ಮ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಬಗ್ಗೆ ನಿರಾಶೆ ಮೂಡಿಸದಂತೆ, ಭ್ರಷ್ಟಾಚಾರ ರಹಿತವಾಗಿ, ಜನತೆಗೆ ಸುಲಭವಾಗಿ ಲಭ್ಯವಾಗುವಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.

ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲಾ ನಾಯಕರು ಕಾರ್ಯಕರ್ತರು ಜೊತೆಗಿರುವುದು ತಮಗೆ ವರದಾನವಾಗಿದೆ. ತನ್ನ ದಿವಂಗತ ಪೋಷಕರ ಹೆಸರಿನ ಟ್ರಸ್ಟ್ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರೋಗ್ಯ, ಕ್ರೀಡೆ, ರಸ್ತೆ, ನೀರು ಇತ್ಯಾದಿ ವಿಚಾರಗಳಲ್ಲಿ ತಾವು ಜನತೆಗೆ ಸಾಕಷ್ಟು ಸ್ಪಂದಿಸಿ ಕೆಲಸ ಮಾಡಿದ್ದು, ಜನರ ವಿಶ್ವಾಸ ತಮ್ಮ ಮೇಲಿದೆ ಎಂದು ಅವರು ಹೇಳಿದರು.

ಇನ್ನೂ ವಿಸ್ತೃತವಾಗಿ ಕೆಲಸ ಮಾಡಲು ಜನತೆ ತನಗೆ ಸದವಕಾಶ ಕಲ್ಪಿಸಲಿ ಎಂದು ಕೋರಿದರು.

ಪೊನ್ನಣ್ಣ ಕಿರುಪರಿಚಯ

೨೫ ವರ್ಷಗಳಿಂದ ಹೈಕೋರ್ಟ್ನಲ್ಲಿ ವಕೀಲರು, ೪೯ ವರ್ಷ ವಯಸ್ಸಿನ ಇವರು ಲ್ಯಾಂಡ್ ಕಾರ್ಪೋರೇಷನ್, ಖ್ಯಾತ ಟಿವಿ ಚಾನಲ್‌ನ ಕಾನೂನು ಸಲಹೆಗಾರರಾಗಿದ್ದಾರೆ. ೨೦೧೩ರಲ್ಲಿ ಕರ್ನಾಟಕ ಸರಕಾರದ ಪ್ರಿನ್ಸಿಪಾಲ್ ವಕೀಲರು, ೨೦೧೪ ಮತ್ತು ೧೮ರಲ್ಲಿ ಅಡಿಷನಲ್ ಅಡ್ವೋಕೇಟ್ ಜನರಲ್, ಡಿನೋಟಿಫಿಕೇಷನ್ ಹಗರಣವೊಂದರಲ್ಲಿ ಹಾಗೂ ಸ್ವಾಮೀಜಿಯೊಬ್ಬರ ವಿರುದ್ಧದ ಅತ್ಯಾಚಾರ ಮೊಕದ್ದಮೆಗಳಲ್ಲಿ ವಿಶೇಷ ವಕೀಲರಾಗಿ ನೇಮಿಸಲ್ಪಟ್ಟಿದ್ದರು.

ಅರಣ್ಯ ಇಲಾಖೆ ತೆರಿಗೆ ವಿಭಾಗದ ಕಾನೂನು ಸಲಹೆಗಾರರಾಗಿ ಪ್ರಕರಣವೊಂದರಲ್ಲಿ ವಾದಿಸಲು ಸಭಾಪತಿಯೊಬ್ಬರ ಪರ ವಿಶೇಷ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ತಮಿಳುನಾಡು ದಿ. ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಆಸ್ತಿ ದುರ್ಬಳಕೆ ಪ್ರಕರಣದ ವಿರುದ್ಧ ಪುಕಾರುದಾರರ ಪರ ವಾದಿಸಿದ್ದರು. ಅಲ್ಲದೆ ಯಡಿಯೂರಪ್ಪ ಸರಕಾರದಲ್ಲಿ ಸಭಾಪತಿಯಾಗಿದ್ದ ಕೆ.ಜಿ. ಬೋಪಯ್ಯ ಅವರು ೧೧ ಶಾಸಕರನ್ನು ಅನರ್ಹಗೊಳಿಸಿದ್ದಾಗ ಆ ಶಾಸಕರ ಪರ ವಾದಿಸಿದ್ದರು.