ಕೊಡ್ಲಿಪೇಟೆ, ಮಾ. ೨೪: ಇಲ್ಲಿನ ಸೌಹಾರ್ದ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ಮೊದಲನೇ ವರ್ಷದ ಸೂಪರ್ ಸೆವೆನ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರಸಂತೆಯ ನಿಸರ್ಗ ಬಾಯ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೂರ್ಗ್ ಬಾಯ್ಸ್ ಕೊಡ್ಲಿಪೇಟೆ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆದ ೭ ಆಟಗಾರರಿಗೆ ಸಿಮೀತವಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೨೬ ತಂಡಗಳು ಭಾಗವಹಿಸಿದ್ದವು. ಫೈನಲ್‌ನಲ್ಲಿ ಕೂರ್ಗ್ ಬಾಯ್ಸ್ ತಂಡವನ್ನು ಸೋಲಿಸಿ ನಿಸರ್ಗ ಬಾಯ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ರನ್ನರ್ಸ್ ತಂಡಕ್ಕೆ ೭ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.

ಉತ್ತಮ ಆಟಗಾರ ಮತ್ತು ಬ್ಯಾಟ್ಸ್ಮನ್ ಹಾಗೂ ಬೌಲರ್ ಪ್ರಶಸ್ತಿಯು ಕ್ರಮವಾಗಿ ನಿಸರ್ಗ ಬಾಯ್ಸ್ ತಂಡದ ವಿನು ಮತ್ತು ಸಂತು ಅವರಿಗೆ, ಉತ್ತಮ ಕೀಪರ್ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯು ಕೂರ್ಗ್ ಬಾಯ್ಸ್ ತಂಡದ ತೌಹೀದ್ ಮತ್ತು ಯುವರಾಜ್ ಅವರಿಗೆ ಲಭಿಸಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಜೆ.ಎಲ್. ಜನಾರ್ದನ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯರಾದ ಪ್ರಸನ್ನ, ಹನೀಫ್, ನಾಗೇಶ್, ವೀರಭದ್ರ, ಎಸ್.ಪಿ. ವಸಂತ್, ಕೂರ್ಗ್ ಬಾಯ್ಸ್ ತಂಡದ ನಾಯಕ ಹೇಮರಾಜ್, ಆಯೋಜಕರಾದ ಇಂದ್ರೇಶ್, ನಟರಾಜ್, ಸಿದ್ದೇಶ್, ಗುರು, ತೀರ್ಪುಗಾರರಾದ ಪುನಿತ್, ಅವಿನಾಶ್, ಸೇರಿದಂತೆ ಇತರರು ಇದ್ದರು.