ಸೋಮವಾರಪೇಟೆ, ಮಾ. ೨೩: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಆಯ-ವ್ಯಯ ಮಂಡನೆ ನಡೆದಿದ್ದು, ಒಟ್ಟಾರೆ ರೂ. ೨.೭೧ ಲಕ್ಷದ ಉಳಿತಾಯ ನಿರೀಕ್ಷಿಸಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಸಾಲಿನ ಬಜೆಟ್ ಮಂಡಿಸ ಲಾಯಿತು. ವೇತನ ಅನುದಾನ ರೂ. ೧೧೩ ಲಕ್ಷ, ಎಸ್‌ಎಫ್‌ಸಿ ೨೫ ಲಕ್ಷ, ಆಸ್ತಿ ತೆರಿಗೆ ೬೦ ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ೫೫ ಲಕ್ಷ, ನಿವೇಶನ ಖರೀದಿ ಅನುದಾನ ರೂ. ೧೦೦ ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು ರೂ. ೮೫೪.೧೫ ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ವೇತನಕ್ಕೆ ರೂ ೧೧೩ ಲಕ್ಷ, ವಿದ್ಯುತ್ ೯೫ ಲಕ್ಷ, ನೈರ್ಮಲ್ಯ ಶಾಖೆಯ ಹೊರಗುತ್ತಿಗೆ ನೌಕರರ ವೆಚ್ಚ ೨೨ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ನೌಕರರ ವೆಚ್ಚ ೨೧ ಲಕ್ಷ ಸೇರಿದಂತೆ ವಿವಿಧ ಮೂಲಗಳ ವೆಚ್ಚ ಒಟ್ಟು ರೂ. ೮೫೧.೪೪ ಲಕ್ಷ ಅಂದಾಜಿಸಲಾಗಿದೆ ಎಂದು ಬಜೆಟ್ ಮಂಡಿಸಿದ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ತಿಳಿಸಿದರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಿ. ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.