ಮಡಿಕೇರಿ ಮಾ.೨೪ : ಮಡಿಕೇರಿ ನಗರಸಭೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಮತ್ತು ಎಲ್ಲಾ ರೀತಿಯ ತೆರಿಗೆಗಳನ್ನು ಶೇ.೩ರಷ್ಟು ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಆಡಳಿತ ಮಂಡಳಿ ತಕ್ಷಣ ಈ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಶೇ.೫ ರಷ್ಟು ತೆರಿಗೆ ಏರಿಕೆ ಮಾಡಿದ್ದ ನಗರಸಭೆ ಇದೀಗ ಮತ್ತೆ ಶೇ.೩ ರಷ್ಟು ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ನಗರದ ಕಟ್ಟಡಗಳ ಮತ್ತು ಮನೆಗಳ ಮಾಲೀಕರಿಗೆ ತೆರಿಗೆ ಹೊರೆಯಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ಸರ್ಕಾರದ ಆದೇಶವಿದೆ ಎಂದು ತೆರಿಗೆ ಪರಿಷ್ಕರಣೆ ಮಾಡಲೇಬೇಕೆಂದು ಬಿಜೆಪಿ ಸದಸ್ಯರ ನೇತೃತ್ವದ ಆಡಳಿತ ಹಾಗೂ ಅಧಿಕಾರಿಗಳು ಹೇಳುವುದರಲ್ಲಿ ಅರ್ಥವಿಲ್ಲ. ಸ್ಥಳೀಯ ಜನರ ಸಮಸ್ಯೆಗಳು ಮತ್ತು ಆರ್ಥಿಕ ಸಂಕಷ್ಟವನ್ನು ಅರಿತು ತೆರಿಗೆ ಹಾಕಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.