ವೀರಾಜಪೇಟೆ, ಮಾ. ೨೩: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯನ್ನು ಗ್ರಾಮ ಗ್ರಾಮದಲ್ಲಿ ಅನುಷ್ಠಾನಗೊಳಿಸುವಂತೆ ಆದೇಶವಿದ್ದರೂ ಗುತ್ತಿಗೆದಾರನು ಕಾಮಗಾರಿ ಪೂರ್ಣಗೊಳಿಸದೆ ಅರ್ಧದಲ್ಲೆ ಕಾಮಗಾರಿ ಸ್ಥಗಿತಗೊಳಿಸಿ ಹಿಂದಿರುಗಿದ ಪ್ರಸಂಗ ಆರ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣಗೊಂಡಿದ್ದು ಗ್ರಾಮದಲ್ಲಿ ಇದೀಗ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಗ್ರಾಮದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಗುತ್ತಿಗೆದಾರನಿಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ರೂ. ೨ ಕೋಟಿ ೫೦ ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ನೀಡಲಾಗಿತ್ತು. ಗುತ್ತಿಗೆದಾರನು ಗ್ರಾಮದಲ್ಲಿ ಶೇ. ೬೦ ರಷ್ಟು ಕೆಲಸ ಪೂರ್ಣಗೊಳಿಸಿದ್ದು, ಉಳಿದ ಶೇ. ೪೦ ರಷ್ಟು ಕಾಮಗಾರಿ ಅಪೂರ್ಣವಾಗಿದೆ. ಗ್ರಾಮದಲ್ಲಿ ಈ ಹಿಂದೆ ಕುಡಿಯುವ ನೀರು ಯೋಜನೆಗೆ ಅಳವಡಿಸಲಾಗಿರುವ ಪೈಪ್‌ಲೈನ್ ವ್ಯವಸ್ಥೆಗೆ ಜಲಜೀವನ್ ಮಿಷನ್ ಯೋಜನೆಯ ನೀರಿನ ಲೈನ್‌ಗಳನ್ನು ಅಳವಡಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಅಳವಡಿಸಲಾಗಿದ್ದ ಪೈಪ್‌ಲೈನ್‌ಗಳನ್ನು ತುಂಡರಿಸಿದ್ದಾರೆ. ಹಿಂದಿದ್ದ ಕುಡಿಯುವ ನೀರಿನ ಲೈನ್‌ನಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿತ್ತು. ಆದರೆ ಜಲಜೀವನ್ ಮಿಷನ್ ಯೋಜನೆಯಿಂದ ಸರಾಗವಾಗಿ ನೀರು ಸರಬರಾಜಾಗದೆ ಕುಡಿಯುವ ನೀರು ಸ್ಥಗಿತವಾಗಿದೆ ಎಂದು ಕುಡಿಯುವ ನೀರು ಬಳಕೆದಾರರು ಆರೋಪಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಕುಡಿಯುವ ನೀರು ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಿAದ ನೀರಿನ ತೊಟ್ಟಿ ಅಳವಡಿಸಿ ಮನೆ ಮನೆಗೆ ನೀರು ಸರಬರಾಜು ಮಾಡುತ್ತಿದ್ದರು. ಇದೀಗ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸುವ ತವಕದಲ್ಲಿ ಈ ಹಿಂದಿದ್ದ ಪೈಪ್ ಲೈನ್‌ಗಳನ್ನು ತುಂಡರಿಸಲಾಗಿದೆ. ಮರು ಜೋಡಣೆ ಮಾಡದೆ ಇದೀಗ ಕುಡಿಯುವ ನೀರು ಸ್ಥಗಿತವಾಗಿದೆ. ಮನೆಯ ಅನತಿ ದೂರದಲ್ಲಿರುವ ತೆರೆದ ಬಾವಿಯಿಂದ ನೀರನ್ನು ಹೊತ್ತು ತರುವ ಸ್ಥಿತಿ ಬಂದಿದೆ ಎಂದು ಗ್ರಾಮಸ್ಥ ಜಿ.ಕೆ. ಅಶೋಕ್ ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿಯಿAದ ಕುಡಿಯುವ ನೀರು ಯೋಜನೆಯಡಿಯಲ್ಲಿ ೧೦-೨೦ ಮನೆಗಳಿಗೆ ಒಂದರAತೆ ನೀರಿನ ತೊಟ್ಟಿ ಅಳವಡಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ಇದೀಗ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಅಳವಡಿಸಲಾಗಿರುವ ನಲ್ಲಿಯಲ್ಲಿ ತೊಟ್ಟು ತೊಟ್ಟು ನೀರು ಬರುತ್ತಿದೆ. ಒಂದು ಬಿಂದಿಗೆ ನೀರು ತುಂಬಲು ಸುಮಾರು ಐದು ತಾಸು ಬೇಕಾಗುತ್ತದೆ. ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿಯು ಆದಷ್ಟು ಬೇಗ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬೇಕು ಎಂದು ಪೆರುಂಬಾಡಿಯ ವಾರಿಜ ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾದ ಜಲ ಜೀವನ್ ಮಿಷನ್ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಗುತ್ತಿಗೆದಾರರು ೨೫೦ ಲಕ್ಷ ರೂಪಾಯಿಗಳ ಗುತ್ತಿಗೆ ಪಡೆದಿದ್ದರು. ಎರಡು ವರ್ಷಗಳಲ್ಲಿ ಸುಮಾರು ೬೦ ರಷ್ಟು ಕಾಮಗಾರಿ ಪೂರ್ಣಗೊಳಿಸಿ ಶೇ. ೪೦ ರಷ್ಟು ಕೆಲಸ ಪೂರ್ಣಗೊಳಿಸದೆ ಹಿಂದಿರುಗಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇಂದಿನವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರುವುದಿಲ್ಲ. ಜಿಲ್ಲಾಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಗುತ್ತಿಗೆದಾರನಿಂದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಬೇಕು ಎಂದು ಆರ್ಜಿ ಗ್ರಾ.ಪಂ. ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಆಗ್ರಹಿಸಿದ್ದಾರೆ.

- ಕಿಶೋರ್ ಕುಮಾರ್ ಶೆಟ್ಟಿ